ಸಿಇಟಿ ಫಲಿತಾಂಶ: ಟಾಪರ್ ಗಳು ಯಾರು? ಇಲ್ಲಿದೆ ಮಾಹಿತಿ

ಬೆಂಗಳೂರು: ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯ ಫಲಿತಾಂಶ ಇಂದು ಪ್ರಕಟಗೊಂಡಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಫಲಿತಾಂಶವನ್ನು ಪ್ರಕಟಿಸಿದ್ದಾರೆ.
ಈ ಬಾರಿ ಸಿಇಟಿಗೆ 3,30,646 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದು, ಈ ಪೈಕಿ 3,09,014 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದರು. 2,92,782 ವಿದ್ಯಾರ್ಥಿಗಳು ಎಲಿಜಿಬಿಲಿಟಿ (ಅರ್ಹತೆ) ಪಡೆದಿದ್ದಾರೆ.
ಇಂಜಿನಿಯರಿಂಗ್ ವಿಭಾಗ:
ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಆರ್.ವಿ. ಪಿಯು ಕಾಲೇಜು ವಿದ್ಯಾರ್ಥಿನಿ ತನೀಶಾ ಕಾರ್ತಿಕ್ 99.44 ಶೇ. ಅಂಕಗಳೊಂದಿಗೆ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ಬೆಂಗಳೂರಿನ ಕೆಎಂಡಬ್ಲ್ಯುಎ ಪಿಯು ಕಾಲೇಜು ವಿದ್ಯಾರ್ಥಿ ಸೃಜನ್ ಬಿ.ಎಸ್. ದ್ವಿತೀಯ ರ‍್ಯಾಂಕ್ ಗಳಿಸಿದ್ದಾರೆ. ಬೆಂಗಳೂರಿನ ಆರ್.ವಿ. ಪಿಯು ಕಾಲೇಜು ವಿದ್ಯಾರ್ಥಿ ನಿನಾದ್ ವಸಿಷ್ಠ್ ತೃತೀಯ ರ್ಯಾಂಕ್ ಗಳಿಸಿದ್ದಾರೆ. ಮಂಗಳೂರಿನ ಟಿ.ಎಲ್.ಸಿ. ಪಿಯು ಕಾಲೇಜು ವಿದ್ಯಾರ್ಥಿಗಳಾದ ಇರಾ ಜೈನ್ 4ನೇ, ರಿಶೋನ್ ಫೆರ್ನಾಂಡಿಸ್ 5ನೇ, ಅಬ್ಬಿ ಸಣ್ಣಯ್ಯ 8ನೇ ರ್ಯಾಂಕ್ ಗಳಿಸಿದ್ದಾರೆ. ಬೆಳ್ತಂಗಡಿ ಗುರುವಾಯನಕೆರೆಯ ವಿದ್ವತ್ ಪಿಯು ಕಾಲೇಜು ವಿದ್ಯಾರ್ಥಿ ಚಿನ್ಮಯ್ ಜಿ.ಕೆ. 7ನೇ ರ್ಯಾಂಕ್ ಗಳಿಸಿದ್ದಾರೆ.
ಪಶು ವೈದ್ಯಕೀಯ ವಿಭಾಗ
ಪಶು ವೈದ್ಯಕೀಯ ವಿಭಾಗದಲ್ಲಿ ಬೆಂಗಳೂರಿನ ಬಿಎಎಸ್ಇ ಕಾಲೇಜು ವಿದ್ಯಾರ್ಥಿನಿ ನಯನಾ ಗೋಪಿ ಪ್ರಥಮ, ದಾವಣಗೆರೆಯ ಎಂ.ವಿ. ಪಿಯು ಕಾಲೇಜು ವಿದ್ಯಾರ್ಥಿನಿ ಅಮೂಲ್ಯ ಎಸ್. ದ್ವಿತೀಯ ಹಾಗೂ ಬೆಂಗಳೂರಿನ ಆರ್.ವಿ. ಪಿಯು ಕಾಲೇಜು ವಿದ್ಯಾರ್ಥಿ ರಿತ್ವಿಕ್ ಕುಮಾರ್ ತೃತೀಯ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಕೃಷಿ ವಿಭಾಗ
ಕೃಷಿ ವಿಭಾಗದಲ್ಲಿ ಬೆಂಗಳೂರಿನ ಆರ್.ವಿ. ಪಿಯು ಕಾಲೇಜು ವಿದ್ಯಾರ್ಥಿ ನಿನಾದ್ ವಸಿಷ್ಠ್ ಪ್ರಥಮ, ಧಾರವಾಡದ ಅರ್ಜುನ್ ಪಿಯು ಕಾಲೇಜು ವಿದ್ಯಾರ್ಥಿ ಅನ್ಮೋಲ್ ಪ್ರಭು ದ್ವಿತೀಯ ಹಾಗೂ ಮಂಗಳೂರಿನ ಎಕ್ಸ್ ಪರ್ಟ್ ಪಿಯು ಕಾಲೇಜು ವಿದ್ಯಾರ್ಥಿ ಸಮಯ್ ಎ.ಎಸ್. ತೃತೀಯ ರ್ಯಾಂಕ್ ಗಳಿಸಿದ್ದಾರೆ.
ನರ್ಸಿಂಗ್ ವಿಭಾಗ
ನರ್ಸಿಂಗ್ ವಿಭಾಗದಲ್ಲಿ ನಯನಾ ಗೋಪಿ ಪ್ರಥಮ, ಅಮೂಲ್ಯ ಎಸ್. ದ್ವಿತೀಯ ಹಾಗೂ ರಿತ್ವಿಕ್ ಕುಮಾರ್ ತೃತೀಯ ರ್ಯಾಂಕ್ ಗಳಿಸಿದ್ದಾರೆ.
ಯೋಗ ಮತ್ತು ನ್ಯಾಚುರೋಪತಿ ವಿಭಾಗ
ಯೋಗ ಮತ್ತು ನ್ಯಾಚುರೋಪತಿ ವಿಭಾಗದಲ್ಲಿ ನಯನಾ ಗೋಪಿ ಪ್ರಥಮ, ಅಮೂಲ್ಯ ಎಸ್. ದ್ವಿತೀಯ ಮತ್ತು ಸುಚಿತಾ ಎಂ. ತೃತೀಯ ರ್ಯಾಂಕ್ ಗಳಿಸಿದ್ದಾರೆ.
ಬಿ. ಫಾರ್ಮಾ ವಿಭಾಗ
ಬಿ. ಫಾರ್ಮಾ ವಿಭಾಗದಲ್ಲಿ ನಯನಾ ಗೋಪಿ ಪ್ರಥಮ, ಅಮೂಲ್ಯ ಎಸ್. ದ್ವಿತೀಯ ಮತ್ತು ಸುಚಿತಾ ಎಂ. ತೃತೀಯ ರ್ಯಾಂಕ್ ಗಳಿಸಿದ್ದಾರೆ.
ಫಾರ್ಮಾ ಡಿ. ವಿಭಾಗ
ಫಾರ್ಮಾ ಡಿ. ವಿಭಾಗ ದಲ್ಲಿ ನಯನಾ ಗೋಪಿ ಪ್ರಥಮ, ಅಮೂಲ್ಯ ಎಸ್. ದ್ವಿತೀಯ ಮತ್ತು ಸುಚಿತಾ ಎಂ. ತೃತೀಯ ರ್ಯಾಂಕ್ ಗಳಿಸಿದ್ದಾರೆ.
ಇಂದು (ಜೂ.6) ಅಪರಾಹ್ನ 2 ಗಂಟೆಯ ನಂತರ ಅಭ್ಯರ್ಥಿಗಳು ಆನ್ ಲೈನ್ ಮೂಲಕ ತಮ್ಮ ಅಂಕಪಟ್ಟಿ ಮತ್ತು ರ‍್ಯಾಂಕ್ ಅನ್ನು ವೀಕ್ಷಿಸಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
https://keaonline.karnataka.gov.in/ugcet_2026_results/ ಅಥವಾ https://cetonline.karnataka.gov.in/kea/ ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು.






