‘ಅರ್ನಾಬ್ ಮತ್ತು ಮುರಸು ಚಂಡಮಾರುತಗಳ ವೇಳೆ ನೆರವು’ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ಧನ್ಯವಾದ ತಿಳಿಸಿದ ಚಂದ್ರಬಾಬು ನಾಯ್ಡು

ಡಿ.ಕೆ.ಶಿವಕುಮಾರ್/ಚಂದ್ರಬಾಬು ನಾಯ್ಡು | Photo Credit : PTI
ಬೆಂಗಳೂರು : ಅರ್ನಾಬ್ ಮತ್ತು ಮುರಸು ಅವಳಿ ಚಂಡಮಾರುತಗಳಿಂದ ಆಂಧ್ರಪ್ರದೇಶದಲ್ಲಿ ಉಂಟಾದ ಭಾರಿ ಹಾನಿಯ ನಂತರ, ವಿದ್ಯುತ್ ಪೂರೈಕೆ ಪುನಸ್ರ್ಥಾಪನೆ ಕಾರ್ಯಗಳಿಗೆ ಸಕಾಲಿಕ ನೆರವು ನೀಡಿದ ಕರ್ನಾಟಕ ಸರಕಾರಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕೃತ ಪತ್ರ ಬರೆದು ಧನ್ಯವಾದ ತಿಳಿಸಿದ್ದಾರೆ.
ಚಂಡಮಾರುತಗಳ ತೀವ್ರತೆಯಿಂದಾಗಿ ಆಂಧ್ರಪ್ರದೇಶದ ಹಲವು ಭಾಗಗಳಲ್ಲಿ ವಿದ್ಯುತ್ ಮೂಲಸೌಕರ್ಯಕ್ಕೆ ವ್ಯಾಪಕ ಹಾನಿಯಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಈ ಸಂಕಷ್ಟದ ಸಮಯದಲ್ಲಿ ಕರ್ನಾಟಕ ಸರಕಾರವು ತಕ್ಷಣ ಸ್ಪಂದಿಸಿ, 68 ತಂಡಗಳಲ್ಲಿ ಒಟ್ಟು 592 ಸಿಬ್ಬಂದಿಯನ್ನು ಪುನಸ್ರ್ಥಾಪನೆ ಕಾರ್ಯಕ್ಕಾಗಿ ಆಂಧ್ರಪ್ರದೇಶಕ್ಕೆ ನಿಯೋಜಿಸಿತ್ತು.
ಆಂಧ್ರಪ್ರದೇಶ ಕೇಂದ್ರ ವಿದ್ಯುತ್ ವಿತರಣಾ ನಿಗಮ(ಎಪಿಸಿಪಿಡಿಸಿಎಲ್)ದ ವ್ಯಾಪ್ತಿಯೊಂದರಲ್ಲೇ ಅರ್ನಾಬ್ ಚಂಡಮಾರುತದಿಂದ ಬಾಧಿತವಾದ 1,333 ಗ್ರಾಮಗಳು ಹಾಗೂ ಮುರಸು ಚಂಡಮಾರುತದಿಂದ ಬಾಧಿತವಾದ 1,825 ಗ್ರಾಮಗಳಿಗೆ ವಿದ್ಯುತ್ ಪೂರೈಕೆಯನ್ನು ಮರುಸ್ಥಾಪಿಸಬೇಕಾಗಿತ್ತು. ಅಲ್ಲದೆ, ಅರ್ನಾಬ್ ಚಂಡಮಾರುತದಲ್ಲಿ 1,852 ವಿದ್ಯುತ್ ಕಂಬಗಳು ಹಾಗೂ ಮುರಸು ಚಂಡಮಾರುತದಲ್ಲಿ 7,850 ಕಂಬಗಳು ಹಾನಿಗೊಳಗಾಗಿದ್ದವು ಅಥವಾ ನೆಲಕ್ಕುರುಳಿದ್ದವು.
ಸಮರೋಪಾದಿಯ ಕಾರ್ಯಾಚರಣೆ: ಆಂಧ್ರ ಸಿಎಂ ಶ್ಲಾಘನೆ: ಆಂಧ್ರಪ್ರದೇಶ ಕೇಂದ್ರ ವಿದ್ಯುತ್ ವಿತರಣಾ ನಿಗಮದ ವ್ಯಾಪ್ತಿಯಲ್ಲಿ ಅರ್ನಾಬ್ ಚಂಡಮಾರುತದ ನಂತರ 165 ತಂಡಗಳಲ್ಲಿ 1,580 ಸಿಬ್ಬಂದಿಯನ್ನು ಮತ್ತು ಮುರಸು ಚಂಡಮಾರುತದ ನಂತರ 390 ತಂಡಗಳಲ್ಲಿ 3,292 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಇದಕ್ಕೆ ಪೂರಕವಾಗಿ ಕರ್ನಾಟಕದಿಂದ ಬಂದ 592 ಸಿಬ್ಬಂದಿಯನ್ನೊಳಗೊಂಡ 68 ತಂಡಗಳು ಕಠಿಣ ಪರಿಸ್ಥಿತಿಯಲ್ಲೂ ಸ್ಥಳೀಯ ಸಿಬ್ಬಂದಿಯೊಂದಿಗೆ ಕೈಜೋಡಿಸಿ, ಸಮರೋಪಾದಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ದೊಡ್ಡ ಬಲ ನೀಡಿತು ಎಂದು ಚಂದ್ರಬಾಬು ನಾಯ್ಡು ಶ್ಲಾಘಿಸಿದ್ದಾರೆ.
ಪ್ರತಿ ನೆರವಿನ ಭರವಸೆ: ಎರಡೂ ರಾಜ್ಯಗಳು ಭೌಗೋಳಿಕ, ಆರ್ಥಿಕ ಮತ್ತು ಸಾಂಸ್ಕೃ ತಿಕವಾಗಿ ನಿಕಟ ಬಾಂಧವ್ಯ ಹೊಂದಿದ್ದು, ವಿಪತ್ತಿನ ಸಂದರ್ಭದಲ್ಲಿ ಇಂತಹ ಪರಸ್ಪರ ಸಹಕಾರವು ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭವಿಷ್ಯದಲ್ಲಿ ಕರ್ನಾಟಕಕ್ಕೆ ಯಾವುದೇ ನೈಸರ್ಗಿಕ ವಿಕೋಪ ಅಥವಾ ತುರ್ತು ಪರಿಸ್ಥಿತಿ ಎದುರಾದಲ್ಲಿ, ಆಂಧ್ರಪ್ರದೇಶ ಸರಕಾರವು ಸಿಬ್ಬಂದಿ, ಉಪಕರಣಗಳು ಮತ್ತು ಯಂತ್ರೋಪಕರಣಗಳು ಸೇರಿದಂತೆ ಎಲ್ಲ ರೀತಿಯ ನೆರವು ನೀಡಲು ಸದಾ ಸಿದ್ಧವಿರುತ್ತದೆ ಎಂದು ಚಂದ್ರಬಾಬು ನಾಯ್ಡು ಭರವಸೆ ನೀಡಿದ್ದಾರೆ.






