ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರ ಸ್ವಾಮೀಜಿ ನಿಧನ

ಬೆಂಗಳೂರು, ಆ.16 : ಕೆಂಗೇರಿ ಸಮೀಪದಲ್ಲಿನ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ (82) ನಿನ್ನೆ ತಡರಾತ್ರಿ ನಿಧನರಾಗಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮೀಜಿ ನಿನ್ನೆ ತಡರಾತ್ರಿ 12.01ರಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಶ್ರೀಮಠದ ವತಿಯಿಂದ ಶಿಕ್ಷಣ, ಆಧ್ಯಾತಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಲ್ಲದೆ ಸಮಾಜ ಸೇವಾ ಕಾರ್ಯಗಳಲ್ಲಿ ಶ್ರೀಗಳು ತಮ್ಮನ್ನು ತೊಡಗಿಸಿಕೊಂಡಿದ್ದರು. ಚಂದ್ರಶೇಖರನಾಥ ಸ್ವಾಮಿ, ವಿಶ್ವ ಒಕ್ಕಲಿಗರ ಮಠದ ಮೊದಲ ಪೀಠಾಧಿಪತಿಯಾಗಿದ್ದರು.
ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಇತ್ತೀಚೆಗೆ ಶ್ರೀಗಳು, ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರನ್ನು ಮಠದ ಪೀಠಾಧಿಪತಿಗಳನ್ನಾಗಿ ಮಾಡಿದ್ದರು. ಸ್ವಾಮೀಜಿ ನಿಧನಕ್ಕೆ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ಬಿ.ವೈ.ವಿಜಯೇಂದ್ರ, ಒಕ್ಕಲಿಗರ ಸಂಘದ ಬಿ.ಕೆಂಚಪ್ಪಗೌಡ, ಸಚಿವರು, ಶಾಸಕರು ಹಾಗೂ ಸಮಾಜದ ಮುಖಂಡರು ಸಂತಾಪ ಸೂಚಿಸಿದ್ದಾರೆ.
‘ವಿಶ್ವ ಒಕ್ಕಲಿಗರ ಮಠದ ಮಠಾಧೀಶರಾಗಿದ್ದ ಶ್ರೀಕುಮಾರ ಚಂದ್ರಶೇಖರ ಸ್ವಾಮೀಜಿ ಭೈರವೈಕ್ಯರಾದ ಸುದ್ದಿ ತಿಳಿದು ಮನಸ್ಸಿಗೆ ನೋವಾಗಿದೆ. ಸ್ವಾಮೀಜಿಯವರ ಆತ್ಮಕ್ಕೆ ಪರಮಾತ್ಮನು ಚಿರಶಾಂತಿಯನ್ನು ಕರುಣಿಸಲಿ. ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಸಮಸ್ತ ಭಕ್ತವೃಂದಕ್ಕೆ ನೀಡಲಿ’
-ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ
‘ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿರವರು ಭೈರವೈಕ್ಯರಾದ ಸುದ್ದಿ ತಿಳಿದು ದುಃಖವಾಯಿತು. ಆಧ್ಯಾತ್ಮ ಲೋಕದಲ್ಲಿ ಮಹೋನ್ನತ ಸಾಧನೆ ಮಾಡಿದ್ದ ಪರಮಪೂಜ್ಯರು ಸಮಾಜ ಸೇವೆ ಹಾಗೂ ಧರ್ಮ ಕೈಂಕರ್ಯದಲ್ಲಿ ಸದಾ ಮುಂಚೂಣಿಯಲ್ಲಿ ಇರುತ್ತಿದ್ದರು. ಶ್ರೀಗಳ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಕ್ತರಿಗೆ ಶ್ರೀಕಾಲ ಭೈರವೇಶ್ವರ ದೇವರು ದಯಪಾಲಿಸಲಿ’
-ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ







