ಆಗಸ್ಟ್ 8 ರಿಂದ 15ರ ವರೆಗೆ ‘ಸಂಘಟನ್ ಸೃಜನ್ ಅಭಿಯಾನ’ : ಚಾಂಡಿ ಉಮ್ಮನ್

ಬೆಂಗಳೂರು : ‘ಸಂಘಟನ್ ಸೃಜನ್ ಅಭಿಯಾನ’ದ ಭಾಗವಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯ ಅಧ್ಯಕ್ಷರ ನೇಮಕಕ್ಕಾಗಿ 17 ಬ್ಲಾಕ್ ಮಟ್ಟದ ಸಭೆಗಳನ್ನು ಆಗಸ್ಟ್ 8ರಿಂದ ಆ.15ರ ವರೆಗೆ ನಡೆಸಲಿದ್ದೇವೆ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಜಿಲ್ಲಾಧ್ಯಕ್ಷರ ನೇಮಕಕ್ಕೆ ಹೆಸರುಗಳನ್ನು ಶಿಫಾರಸು ಮಾಡಲಾಗುವುದು ಎಂದು ಎಐಸಿಸಿ ವೀಕ್ಷಕ ಚಾಂಡಿ ಉಮ್ಮನ್ ತಿಳಿಸಿದ್ದಾರೆ.
ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನೇಕಲ್, ಸರ್ಜಾಪುರ, ಅತ್ತಿಬೆಲೆ, ಹೆಬ್ಬಗೋಡಿ, ಉತ್ತರಹಳ್ಳಿ, ಗೊಟ್ಟಿಗೆರೆ, ಬೇಗೂರು, ಜಿಗಣಿ, ಬನಶಂಕರಿ, ಬೊಮ್ಮನಹಳ್ಳಿ, ಬಿಟಿಎಂ, ಕೋರಮಂಗಲ, ಜಯನಗರ, ಜೆ.ಪಿ ನಗರದಲ್ಲಿ ಸಭೆ ಮಾಡಲಾಗುವುದು. ಪಕ್ಷದ ಎಲ್ಲ ಕಾರ್ಯಕರ್ತರು ಈ ಅಭಿಯಾನದಲ್ಲಿ ಭಾಗವಹಿಸಿ ನಿಮ್ಮ ಜಿಲ್ಲಾಧ್ಯಕ್ಷರು ಯಾರಾಗಬೇಕು ಎಂದು ನಿಮ್ಮ ಅಭಿಪ್ರಾಯವನ್ನು ತಿಳಿಸಬಹುದು ಎಂದರು.
ರಾಜ್ಯದಲ್ಲಿ ಈ ಪ್ರಕ್ರಿಯೆಯನ್ನು ನಡೆಸುತ್ತಿದ್ದು, ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ನೂತನ ಅಧ್ಯಕ್ಷರ ನೇಮಕ ಮಾಡಲಾಗುವುದು. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಸಂಗ್ರಹಿಸಿ ನಂತರ ಜಿಲ್ಲಾಧ್ಯಕ್ಷರ ಆಯ್ಕೆ ಸಂಬಂಧ ಹೈಕಮಾಂಡ್ ನಾಯಕರಿಗೆ ಹೆಸರುಗಳನ್ನು ಶಿಫಾರಸು ಮಾಡಲಾಗುವುದು. ತಳಮಟ್ಟದಲ್ಲಿ ನಾಯಕತ್ವವನ್ನು ಬಲಗೊಳಿಸಲು ಈ ಅಭಿಯಾನ ಮಾಡಲಾಗುತ್ತಿದೆ ಎಂದರು.
2023ರಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿ ತುಂಬಿದೆ. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದ್ದು, ಇನ್ನೂ 3 ವರ್ಷಗಳಲ್ಲಿ ಲೋಕಸಭೆ ಚುನಾವಣೆಯನ್ನು ಎದುರಿಸಲಿದ್ದೇವೆ. ಹೀಗಾಗಿ ಪಕ್ಷ ಸಂಘಟನೆ ಮಾಡಬೇಕಾಗಿದೆ. ಕಾರ್ಯಕರ್ತರು ಪಕ್ಷವನ್ನು ಮುನ್ನಡೆಸಬೇಕೆಂಬುದು ರಾಹುಲ್ ಗಾಂಧಿ ಉದ್ದೇಶ. ಹೀಗಾಗಿ ಆ.8ರಿಂದ ಅಭಿಯಾನ ಆರಂಭವಾಗಲಿದೆ ಎಂದು ಹೇಳಿದರು.
ಇತ್ತೀಚೆಗೆ ಜೆನ್ ಝೀ ವಿದ್ಯಾರ್ಥಿಗಳ ಪ್ರತಿಭಟನೆಗೆ ರಾಹುಲ್ ಗಾಂಧಿ ಶಕ್ತಿ ತುಂಬಿದ್ದಾರೆ. ಇದೀಗ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸಲು ಆದ್ಯತೆ ನೀಡಲಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರಿಗೆ ಮೊದಲ ಆದ್ಯತೆ ನೀಡುವ ಗುರಿ ಇದೆ ಎಂದರು. ಈ ವೇಳೆ ಮಾಜಿ ಸಂಸದ ಡಿ.ಕೆ.ಸುರೇಶ್, ಖಜಾಂಚಿ ವಿನಯ್ ಕಾರ್ತೀಕ್, ದಕ್ಷಿಣ ಜಿಲ್ಲಾಧ್ಯಕ್ಷ ಒ.ಮಂಜುನಾಥ, ಪ್ರಧಾನ ಕಾರ್ಯದರ್ಶಿ ಎಂ.ರಾಜಕುಮಾರ್ ಉಪಸ್ಥಿತರಿದ್ದರು.






