ಬದಲಾಗುತ್ತಾ ‘ನಮ್ಮ ಮೆಟ್ರೊ' ಹೆಸರು? ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ

ಬೆಂಗಳೂರು: ‘ನಮ್ಮ ಮೆಟ್ರೊ'ಗೆ ಬಸವೇಶ್ವರರ ಹೆಸರನ್ನು ಇಡುವ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಮೆಟ್ರೊ ಪ್ರಯಾಣಿಕರು ಸೇರಿದಂತೆ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಅನುಭವ ಮಂಟಪದ ರೂವಾರಿ ಬಸವೇಶ್ವರರ ಹೆಸರನ್ನು ‘ನಮ್ಮ ಮೆಟ್ರೊ'ಗೆ ಇಡುವ ಸಂಬಂಧ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದು ಇತ್ತೀಚೆಗೆ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ನೀಡಿದ್ದರು.
ʼʼನಮ್ಮ ಮೆಟ್ರೋ ಕೇವಲ ಹೆಸರಲ್ಲ. ಅದು ಬೆಂಗಳೂರಿನ ಜನರಿಗೆ ಭಾವನಾತ್ಮಕ ವಿಷಯವೂ ಹೌದು. ಇಂತಹ ವಿಷಯಗಳ ಜತೆ ಆಟವಾಡುವುದನ್ನು ಬಿಟ್ಟುಬಿಡಿʼʼ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಎಂ.ಬಿ.ಪಾಟೀಲ್ ಹೇಳಿದ್ದೇನು?
ʼʼಮೆಟ್ರೊಗೆ ಬಸವೇಶ್ವರರ ಹೆಸರು ಇಡಬೇಕು ಎನ್ನುವ ಬೇಡಿಕೆ ಇದೆ. ಕೇವಲ ಯಾವುದೊ ಒಂದು ನಿಲ್ದಾಣಕ್ಕೆ ಹೆಸರು ಇಡುವ ಬದಲು ಇಡೀ ಮೆಟ್ರೊ ವ್ಯವಸ್ಥೆಗೇ ಬಸವೇಶ್ವರರ ಹೆಸರು ಇಡುವುದು ಸೂಕ್ತ. ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಟ್ಟ ಹಾಗೆ ಮೆಟ್ರೊಗೂ ಮಾಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಅಂತಿಮ ಮಾಡಲಾಗುವುದು. ಅಂತೆಯೇ, ಬಿಜಾಪುರ ಹೋಗಿ ವಿಜಯಪುರ ಆಗಿರುವ ಜಿಲ್ಲೆಗೆ "ಬಸವೇಶ್ವರ ಜಿಲ್ಲೆ" ಎಂದು ನಾಮಕರಣ ಮಾಡಬೇಕೆಂಬ ಧ್ವನಿಯೂ ಕೇಳಿಬಂದಿದೆ. ಯಾವುದಕ್ಕೇ ಆಗಲಿ ಬಸವೇಶ್ವರರ ಹೆಸರನ್ನು ಇಡುವುದಕ್ಕೆ ನಮ್ಮ ಯಾರ ವಿರೋಧವೂ ಇಲ್ಲ. ವೈಯಕ್ತಿಕವಾಗಿ ನಾನಂತೂ ಬಸವಣ್ಣನವರ ಅಪ್ಪಟ ಅನುಯಾಯಿ. ಆದರೆ, ಹೆಸರು ಬದಲಾವಣೆ ಮಾಡುವುದಕ್ಕೆ ಮುಂಚೆ ಇತರ ಹತ್ತು ಹಲವು ಸಾಧಕ ಬಾಧಕಗಳ ಬಗ್ಗೆ ಆಲೋಚಿಸಬೇಕಾಗುತ್ತದೆʼʼ ಎಂದು ಪಾಟೀಲ್ ಅವರು ಹೇಳಿದ್ದರು.
ಹಲವರು ನಮ್ಮ ಮೆಟ್ರೋ ಹೆಸರಿನ ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದರೆ, ಇನ್ನು ಕೆಲವರು ಬೆಂಬಲಿಸಿದ್ದಾರೆ. ಸಮಾನತೆಯ ಹರಿಕಾರ ಬಸವಣ್ಣನವರ ಹೆಸರನ್ನು ನಮ್ಮ ಮೆಟ್ರೋಗೆ ‘ನಮ್ಮ ಬಸವ’, ‘ಬಸವ ಮೆಟ್ರೋ’ ಎಂದು ನಾಮಕರಣ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ʼನಮ್ಮ ಮೆಟ್ರೋ ಆಗಿಯೇ ಉಳಿಯಲಿʼ
ಬೆಂಗಳೂರಿನ ನಮ್ಮ ಮೆಟ್ರೋ - ನಮ್ಮ ಮೆಟ್ರೋ ಆಗಿಯೇ ಉಳಿಯಲಿ. ಅದರಲ್ಲಿನ ಬೇರೆ ಬೇರೆ ಮಾರ್ಗಗಳಿಗೆ ಈಗಿರುವ ಬಣ್ಣದ ಜೊತೆಯಲ್ಲಿ ಕನ್ನಡ ರಾಜ ಮನೆತನಗಳ ಹೆಸರು ಇಡಲಿ. ಚಾಲುಕ್ಯ ಲೈನ್, ಕದಂಬ ಲೈನ್, ಹೊಯ್ಸಳ ಲೈನ್.. ನಿಲ್ದಾಣಗಳನ್ನು ಈಗಿನ ಹೆಸರಿನಿಂದಲೇ ಕರೆಯಲಿ.
ಇನ್ನೂ ಕೆಲವರು, ಇಂತಹ ವಿಷಯಗಳ ಜತೆ ಆಟವಾಡುವುದನ್ನು ಬಿಟ್ಟುಬಿಡಿ. ಹೆಸರು ಬದಲಾವಣೆ ಮಾಡುವ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ತಲೆ ಕೆಡಿಸಿಕೊಳ್ಳಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ʼʼರಾಜಕೀಯ ಲಾಭಕ್ಕಾಗಿ ಓಲೈಕೆ ಮಾಡುವುದನ್ನು ಬಿಟ್ಟುಬಿಡಿ. ಬದಲಾಗಿ ಹೊಸ ಮೆಟ್ರೋ ಯೋಜನೆಗಳನ್ನು ಆರಂಭಿಸುವುದು ಬೆಂಗಳೂರಿನ ನಾಗರೀಕರಿಗೆ ಅವಶ್ಯಕತೆ ಇದೆಯೇ ಹೊರತು ಹೆಸರು ಬದಲಾವಣೆಯಲ್ಲ ಎಂದು ಮತ್ತೊಬ್ಬ ಮೆಟ್ರೋ ಪ್ರಯಾಣಿಕರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ʼʼನಟ ಶಂಕರ್ ನಾಗ್ ಅವರ ಹೆಸರಿಡಿʼʼ
ʼʼಈಗಾಗಲೇ ನೆನ್ನೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇವೆ. ರಾಜ್ಯೋತ್ಸವದ ಸಂಭ್ರಮದಲ್ಲಿ ಮೆಟ್ರೋ ಕನಸು ಕಂಡ ನಟರಾದ ಶಂಕರ್ ನಾಗ್ ಅವರ ಹೆಸರನ್ನು ಯಾವುದಾದರು ಮುಖ್ಯ ಮೆಟ್ರೋ ನಿಲ್ದಾಣಕ್ಕೆ ಇಡಲು ಈ ಕೂಡಲೇ ಕ್ರಮ ತೆಗೆದುಕೊಳ್ಳಿ..ಲಕ್ಷಾಂತರ ಕನ್ನಡಿಗರ ಬೇಡಿಕೆ ಇದಾಗಿದೆ.. ದಯವಿಟ್ಟು ಸ್ಪಂದಿಸಿ..ʼʼ ಎಂದು ಕನ್ನಡ ಪರ ಸಂಘಟನೆಯ ರೂಪೇಶ್ ರಾಜಣ್ಣ ಪ್ತತಿಕ್ರಿಯಿಸಿದ್ದಾರೆ.
ʼʼಹೆಸರು ಬದಲಾಯಿಸಿದ ತಕ್ಷಣ ಅಭಿವೃಧಿಯಾಗದು. "ನಮ್ಮ ಮೆಟ್ರೋ" ಕನ್ನಡಿಗರ ನಮ್ಮತನದ ಸಂಕೇತದಂತೆ ಇದೆ. ಈ ನಾಡಿಗೆ ಬಸವಣ್ಣನವರ ಕೊಡುಗೆ ದೊಡ್ಡದಿದೆ. ಯಾವುದಾದರೂ ಹೊಸ ಯೋಜನೆ ಪ್ರಾರಂಭಿಸಿ ಬಸವಣ್ಣನವರ ಹೆಸರಿಡಿ.ʼʼ ಅಶೋಕ್ ಎಂಬವರು ಆಗ್ರಹಿಸದ್ದಾರೆ.







