ಬೀದಿ ನಾಯಿಗಳಿಗೆ ‘ಚಿಕನ್ ರೈಸ್’; ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ 2.88 ಕೋಟಿ ರೂ. ವೆಚ್ಚ

ಸಾಂದರ್ಭಿಕ ಚಿತ್ರ
ಬೆಂಗಳೂರು : ನಗರದಲ್ಲಿರುವ ಬೀದಿ ನಾಯಿಗಳಿಗೆ ‘ಚಿಕನ್ ರೈಸ್’ ನೀಡುವ ಯೋಜನೆಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು 2.88 ಕೋಟಿ ಖರ್ಚು ಮಾಡುತ್ತಿದ್ದು, ಇದಕ್ಕಾಗಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಲ್ಲಿ ನೋಂದಣಿಯಾದ ಸಂಸ್ಥೆ ಮತ್ತು ಏಜೆನ್ಸಿಯಿಂದ ಟೆಂಡರ್ ಆಹ್ವಾನಿಸಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೊರಡಿಸಿರುವ ಟೆಂಡರ್ ಪ್ರಕಾರ, ಪಶುಸಂಗೋಪನಾ ಇಲಾಖೆಯು ಎಂಟು ವಲಯಗಳಾದ ಪೂರ್ವ, ಪಶ್ಚಿಮ, ದಕ್ಷಿಣ, ಆರ್.ಆರ್ ನಗರ, ದಾಸರಹಳ್ಳಿ, ಬೊಮ್ಮನಹಳ್ಳಿ, ಯಲಹಂಕ ಮತ್ತು ಮಹದೇವಪುರಗಳಲ್ಲಿ ಪ್ರತಿ ವಲಯಕ್ಕೆ 500 ನಾಯಿಗಳಿಗೆ ಪ್ರತಿದಿನ ಆಹಾರ ಸೇವೆಗಳನ್ನು ಒದಗಿಸಲು ನೋಂದಾಯಿತ ಸೇವಾ ಪೂರೈಕೆದಾರರಿಂದ ಪ್ರಸ್ತಾವಗಳನ್ನು ಆಹ್ವಾನಿಸಿದೆ.
ನಗರದಾದ್ಯಂತ ಸುಮಾರು 5,000 ಬೀದಿ ನಾಯಿಗಳಿಗೆ ಪ್ರತಿದಿನ ‘ಚಿಕನ್ ರೈಸ್’ ವಿತರಿಸುವಂತಹ ಗುರಿಯನ್ನು ಹೊಂದಿದೆ. ಬಿಬಿಎಂಪಿ ಹೊಸ ಯೋಜನೆಯ ಮಾಹಿತಿ ಪ್ರಕಾರ ಪ್ರತಿಯೊಂದು ಬೀದಿ ನಾಯಿಗೆ ದಿವಸಕ್ಕೆ 22 ರೂಪಾಯಿಗಳನ್ನು ಖರ್ಚು ಮಾಡಲಾಗುತ್ತದೆ. ಸಾರಿಗೆ ವೆಚ್ಚ ಸೇರಿದಂತೆ ಸುಮಾರು ವರ್ಷಕ್ಕೆ ಅಂದಾಜು ಸುಮಾರು 2.88 ಕೋಟಿ ರೂಪಾಯಿಗಳಷ್ಟು ವೆಚ್ಚ ತಗುಲುತ್ತದೆ. ಈ ಯೋಜನೆಯ ವ್ಯಾಪ್ತಿಗೆ ಸುಮಾರು 5,000 ಬೀದಿ ನಾಯಿಗಳನ್ನು ಒಳಪಡಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.







