ಕಬ್ಬಿನ ಬೆಲೆ ನಿಗದಿಪಡಿಸುವ ಅಧಿಕಾರ ರಾಜ್ಯಗಳಿಗೆ ನೀಡುವಂತೆ ಪ್ರಧಾನಿಗೆ ಮುಖ್ಯಮಂತ್ರಿ ಮನವಿ

File Photo: (PC X/@CMofKarnataka)
ಹೊಸದಿಲ್ಲಿ : ಕಬ್ಬಿನ ಬೆಲೆ ನಿಗದಿಪಡಿಸುವ ಅಥವಾ ಅನುಮೋದಿಸುವ ಅಧಿಕಾರವನ್ನು ರಾಜ್ಯ ಸರಕಾರಗಳಿಗೆ ನೀಡುವುದು, ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ ಪರಿಷ್ಕರಿಸುವುದು ಹಾಗೂ ಎಥನಾಲ್ ಖರೀದಿಯನ್ನು ಖಚಿತಪಡಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಸಲ್ಲಿಸಿದರು.
ಸೋಮವಾರ ಪ್ರಧಾನಿಯನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ ಅವರು, ಕಬ್ಬು ಬೆಳೆಗಾರರಿಗೆ ತುರ್ತು ಆರ್ಥಿಕ ನೆರವು ನೀಡಲು ಮತ್ತು ಹೆಚ್ಚಿನ ನಿವ್ವಳ ದರವನ್ನು ಖಚಿತಪಡಿಸಲು ರಾಜ್ಯ ಸರಕಾರವು ಆದೇಶ ಹೊರಡಿಸಿದೆ. ನಮ್ಮ ಅಧಿಸೂಚನೆಯ ಪ್ರಕಾರ, ಕಾರ್ಖಾನೆಗಳು ಆರಂಭದಲ್ಲಿ ಒಪ್ಪಿಕೊಂಡಿದ್ದ ಬೆಲೆಯ ಮೇಲೆ ಪ್ರತಿಟನ್ಗೆ ಹೆಚ್ಚುವರಿ 100 ರೂ.ಗಳನ್ನು ದ್ವಿತೀಯ ಕಂತಾಗಿ ನೀಡುವುದು ಕಡ್ಡಾಯವಾಗಿದೆ ಎಂದು ಹೇಳಿದರು.
ಇದರ ಅನುಷ್ಠಾನವನ್ನು ಸಾಧ್ಯವಾಗಿಸಲು ರಾಜ್ಯ ಸರಕಾರವು ಈ ಹೆಚ್ಚುವರಿ ಮೊತ್ತದ ಶೇ.50ರಷ್ಟು(ಪ್ರತಿ ಟನ್ಗೆ 50 ರೂ.) ರಾಜ್ಯದ ಖಜಾನೆಯಿಂದ ಭರಿಸುವುದಾಗಿ ಮತ್ತು ಪ್ರತಿ ಟನ್ಗೆ ಉಳಿದ 50 ರೂ.ಗಳನ್ನು ಕಾರ್ಖಾನೆಗಳು ಭರಿಸಬೇಕೆಂದು ನಿರ್ಧರಿಸಲಾಗಿದೆ ಎಂದು ಪ್ರಧಾನಿಯ ಗಮನ ಸೆಳೆದರು.
ಈ ಕ್ರಮವು ಶೇ.10.25ರಷ್ಟು ಇಳುವರಿ ಮೇಲೆ ಪ್ರತಿ ಟನ್ಗೆ 3,200 ರೂ. ಮತ್ತು ಶೇ.11.25ರಷ್ಟು ಇಳುವರಿ ಮೇಲೆ ಪ್ರತಿ ಟನ್ಗೆ 3,300 ರೂ. ನಿವ್ವಳ ಬೆಲೆಯನ್ನು (ಕಟಾವು ಮತ್ತು ಸಾಗಾಟ ವೆಚ್ಚ ಹೊರತುಪಡಿಸಿ) ದೃಢಪಡಿಸಿದೆ. ರಾಜ್ಯದ ಅನುದಾನ ಬಳಸಿಕೊಂಡ ಈ ನಿರ್ಣಾಯಕ ಕ್ರಮವು ಎದುರಾದ ಸಂಕಷ್ಟವನ್ನು ತಾತ್ಕಾಲಿಕವಾಗಿ ನಿವಾರಿಸಿದ್ದು, ಸದ್ಯಕ್ಕೆ ಕಬ್ಬು ಬೆಳೆಗಾರರ ಪ್ರತಿಭಟನೆಗಳನ್ನು ನಿಲ್ಲಿಸಿದೆ ಎಂದು ಅವರು ಹೇಳಿದರು.
ಆದಾಗ್ಯೂ, ನಮ್ಮ ಸರಕಾರದ ಆದೇಶವು ಅತ್ಯಗತ್ಯ ಪರಿಹಾರ ಒದಗಿಸಿದರೂ ಅದು ಬೆಲೆ ಅಂತರವನ್ನು ಸಂಪೂರ್ಣವಾಗಿ ನಿವಾರಿಸಿಲ್ಲ. ಏಕೆಂದರೆ, ಸಕ್ಕರೆಯ ಕನಿಷ್ಠ ಬೆಂಬಲ ಬೆಲೆ ಪ್ರತಿ ಕೆ.ಜಿಗೆ 31 ರೂ.ರಲ್ಲಿ ಸ್ಥಗಿತಗೊಂಡಿರುವುದೇ ಸಕ್ಕರೆ ಕಾರ್ಖಾನೆಗಳು ಈ ನಿಗದಿತ ಬೆಲೆಯನ್ನು ರೈತರಿಗೆ ನೀಡಲು ಸಾಧ್ಯವಾಗದಿರಲು ಕಾರಣ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ ಪರಿಷ್ಕರಣೆ: ಸಕ್ಕರೆಯ ಕನಿಷ್ಠ ಬೆಂಬಲ ಬೆಲೆ(ಎಂ.ಎಸ್.ಪಿ)ಯನ್ನು ತಕ್ಷಣ ಪರಿಷ್ಕರಿಸುವುದು ಈ ಸಂಕಷ್ಟಕ್ಕೆ ಅತ್ಯಂತ ಪರಿಣಾಮಕಾರಿ ಪರಿಹಾರ. ಇದರಿಂದ ಕಾರ್ಖಾನೆಗಳಲ್ಲಿ ಹಣದ ಹರಿವು ತಕ್ಷಣ ಸುಧಾರಿಸಿ, ಕೇಂದ್ರ ಅಥವಾ ರಾಜ್ಯದ ಸಹಾಯಧನದ ಅವಶ್ಯಕತೆ ಇಲ್ಲದೆ ರೈತರಿಗೆ ಅಗತ್ಯ ಬೆಲೆ ಪಾವತಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಎಥನಾಲ್ ಖರೀದಿಯ ಖಚಿತತೆ: ರಾಜ್ಯದ ಸಕ್ಕರೆ ಆಧಾರಿತ ಡಿಸ್ಟಿಲರಿಗಳಿಂದ ಎಥನಾಲ್ ಖರೀದಿ ಮಂಜೂರಾತಿಯನ್ನು ಹೆಚ್ಚಿಸಿ ದೃಢಪಡಿಸಬೇಕು. ಇದರಿಂದ, ಕಾರ್ಖಾನೆಗಳಿಗೆ ಸ್ಥಿರ ಆದಾಯದ ಮೂಲ ಸಿಗುತ್ತದೆ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಟಾವು ಮತ್ತು ಸಾಗಾಟ ವೆಚ್ಚದ ಅಧಿಸೂಚನೆ: ರಾಜ್ಯಗಳಿಗೆ ಕಬ್ಬಿನ ಬೆಲೆಯನ್ನು ನಿಗದಿಪಡಿಸಲು ಅಥವಾ ಅನುಮೋದಿಸಲು ಅಧಿಕಾರ ನೀಡುವಂತಹ ಕೇಂದ್ರ ಅಧಿಸೂಚನೆಯನ್ನು ಹೊರಡಿಸಬೇಕು. ಇದರಿಂದ ಕಟಾವು ಮತ್ತು ಸಾಗಾಟ ವೆಚ್ಚದ ಪಾರದರ್ಶಕತೆ ಸಾಧ್ಯವಾಗಿ, ರೈತರಿಗೆ ಎಫ್ಆರ್ಪಿ ಅಸಾಧ್ಯವಾಗದಂತೆ ನೋಡಿಕೊಳ್ಳಬಹುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.







