ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ: 11 ಮೃತದೇಹಗಳು ಕುಟುಂಬಸ್ಥರಿಗೆ ಹಸ್ತಾಂತರ

ಕಾಲ್ತುಳಿತ ಸಂಭವಿಸಿರುವ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ರಾಶಿ ಬಿದ್ದಿರುವ ಪಾದರಕ್ಷೆಗಳು
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಮೊದಲ ಬಾರಿ ಐಪಿಎಲ್ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಿಜಯೋತ್ಸವದ ವೀಕ್ಷಣೆಗೆ ಬಂದಿದ್ದ ವೇಳೆ ಕ್ರೀಡಾಂಗಣದಲ್ಲಿ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ 11 ಮಂದಿಯ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ. ಮೃತದೇಹಗಳನ್ನು ರಾತ್ರಿಯೇ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಪೂರ್ಣಚಂದ್ರ, ಭೂಮಿಕ್, ಪ್ರಜ್ವಲ್, ಚಿನ್ಮಯಿ ಶೆಟ್ಟಿ, ಸಹನಾ ಎಂಬವರ ಮರಣೋತ್ತರ ಪರೀಕ್ಷೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನೆರವೇರಿತು. ಅಕ್ಷತಾ, ದಿವ್ಯಾಂಶಿ, ಶಿವಲಿಂಗ, ಮನೋಜ್, ದೇವಿ, ಶ್ರವಣ್ ಎಂಬವರ ಮರಣೋತ್ತರ ಪರೀಕ್ಷೆ ಬೌರಿಂಗ್ ಆಸ್ಪತ್ರೆಯಲ್ಲಿ ನಡೆಯಿತು. ಬಳಿಕ ಮೃತದೇಹಗಳನ್ನು ಪೊಲೀಸರು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ನಿಗದಿಯಾಗಿತ್ತು. ವಿಜೇತ ತಂಡಕ್ಕೆ ಶುಭಾಶಯ ಕೋರಲು, ಸಂಭ್ರಮ ಆಚರಿಸಲು ಕ್ರೀಡಾಂಗಣಕ್ಕೆ ಲಕ್ಷಾಂತರ ಜನರು ಬಂದಿದ್ದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 47 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.





