ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ: ವಿಜಯೋತ್ಸವ ಕಣ್ತುಂಬಿಕೊಳ್ಳಲು ತೆರಳಿದ್ದ ಕೋಲಾರದ ಸಹನಾ

ಕೋಲಾರ, ಜೂ.5: ಆರ್.ಸಿ.ಬಿ. ತಂಡ ಐಪಿಎಲ್ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರಲ್ಲಿ ಕೋಲಾರ ಮೂಲದ ಸಹನಾ(24) ಕೂಡಾ ಒಬ್ಬರು.
ಕೋಲಾರ ನಗರದ ಎಸ್.ಜಿ. ಬಡಾವಣೆಯ ನಿವಾಸಿಗಳಾದ ಮಂಜುಳ ಮತ್ತು ಸುರೇಶ್ ಬಾಬು ದಂಪತಿಯ ಪುತ್ರಿ ಸಹನಾ ಇಂಜಿನಿಯರಿಂಗ್ ಪದವೀಧರೆ. ಇವರು ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಎರಡು ವರ್ಷದ ಹಿಂದೆ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಉದ್ಯೋಗ ಪಡೆದಿದ್ದರು.
ಆರ್.ಸಿ.ಬಿ. ತಂಡದ ಅಭಿಯಾನಿಯಾಗಿದ್ದ ಇವರು ಚಾಂಪಿಯನ್ ತಂಡದ ವಿಜಯೋತ್ಸವನ್ನು ಕಣ್ತುಂಬಿಕೊಳ್ಳಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಿದ್ದರು. ಈ ವೇಳ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಳಿಕ ಮೃತ ದೇಹವನ್ನು ಪೊಲೀಸ್ ಎಸ್ಕಾರ್ಟ್ ಮೂಲಕ ಆ್ಯಂಬುಲೆನ್ಸ್ ನಲ್ಲಿ ಕೋಲಾರದ ಎಸ್.ಜಿ. ಬಡಾವಣೆಯ ನಿವಾಸಕ್ಕೆ ತರಲಾಯಿತು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
ಸಹನಾ ಮೃತದೇಹವನ್ನು ಬೆಳಗ್ಗೆ ಹತ್ತು ಗಂಟೆವರೆಗೆ ಕೋಲಾರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅವರ ಸ್ವಗ್ರಾಮ ಕೆಜಿಎಫ್ ತಾಲೂಕಿನ ಬಡಮಾಕನಹಳ್ಳಿ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.







