ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ | ಎಸಿಪಿ ವಿಕಾಸ್ ಕುಮಾರ್ ಅಮಾನತು ಆದೇಶ ವಜಾಗೊಳಿಸಿದ ಸಿಎಟಿ

Photo credit: PTI
ಬೆಂಗಳೂರು: ಹನ್ನೊಂದು ಮಂದಿಯನ್ನು ಬಲಿತೆಗೆದುಕೊಂಡ ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚುವರಿ ಪೊಲೀಸ್ ಆಯುಕ್ತ (ಎಸಿಪಿ) ವಿಕಾಸ್ ಕುಮಾರ್ ವಿಕಾಸ್ ಅವರನ್ನು ಅಮಾನತುಗೊಳಿಸಿದ ಕರ್ನಾಟಕ ಸರಕಾರದ ಆದೇಶವನ್ನು ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಧೀಕರಣ (ಸಿಎಟಿ)ವು ಮಂಗಳವಾರ ತಳ್ಳಿಹಾಕಿದೆ.
ವಿಕಾಸ್ ಕುಮಾರ್ ಅವರ ಅಮಾನತು ಆದೇಶವನ್ನು ಯಾವುದೇ ಸಮರ್ಪಕ ಕಾರಣಗಳಿಲ್ಲದೆಯೇ ಯಾಂತ್ರಿಕವಾಗಿ ಹೊರಡಿಸಲಾಗಿತ್ತು ಎಂದು ಸಿಎಟಿಯ ಕೋರಂ ಸದಸ್ಯರಾದ ಬಿ.ಕೆ.ಶ್ರೀವಾಸ್ತವ್ ಹಾಗೂ ಸಂತೋಷ್ ಮೆಹ್ರಾ ಅವರು ಅಭಿಪ್ರಾಯಿಸಿದ್ದಾರೆ.
‘‘ಈ ನ್ಯಾಯಾಧೀಕರಣದ ದೃಷ್ಟಿಯಲ್ಲಿ, (ಸರಕಾರದ) ಆದೇಶವನ್ನು ಯಾಂತ್ರಿಕವಾದ ರೀತಿಯಲ್ಲಿ ಹೊರಡಿಸಲಾಗಿದೆ ಹಾಗೂ ಮನವರಿಕೆಯಾಗುವಂತಹ ಯಾವುದೇ ಪುರಾವೆಗಳನ್ನು ಈ ಆದೇಶವು ಹೊಂದಿಲ್ಲ . ಸಮರ್ಪಕ ಸಾಕ್ಷ್ಯಗಳು ಅಥವಾ ಕಾರಣಗಳಿಲ್ಲದೆಯೇ ಈ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಹೀಗಾಗಿ ಈ ಆದೇಶವನ್ನು ತಳ್ಳಿಹಾಕಲಾಗಿದೆ’’ ಎಂದು ನ್ಯಾಯಾಧೀಕರಣ ತಿಳಿಸಿದೆ.
ವಿಕಾಸ್ ಅವರನ್ನು ತಕ್ಷಣವೇ ಹುದ್ದೆಯಲ್ಲಿ ಮರುನಿಯೋಜಿಸಬೇಕೆಂದು ನ್ಯಾಯಾಧೀಕರಣವು ರಾಜ್ಯ ಸರಕಾರಕ್ಕೆ ಆದೇಶಿಸಿದೆ.
ಶೋಕಾಸ್ ನೋಟಿಸ್ ನೀಡದೆಯೇ ವಿಕಾಸ್ ಕುಮಾರ್ ವಿಕಾಸ್ ಅವರನ್ನು ಅಮಾನತುಗೊಳಿಸಲಾಗಿತ್ತು ಮತ್ತು ಅವರಿಗೆ ವಾದ ಮಂಡನೆಗೆ ಅವಕಾಶ ನೀಡಿರಲಿಲ್ಲ ಎಂದವರ ವಕೀಲರು ನ್ಯಾಯಾಧೀಕರಣದ ಮುಂದೆ ವಾದಿಸಿದ್ದರು. ತೀವ್ರ ದುರ್ವರ್ತನೆ, ಭ್ರಷ್ಟಾಚಾರ, ಕ್ರಿಮಿನಲ್ ನಿರ್ಲಕ್ಷ್ಯ ಮತ್ತಿತರ ಪ್ರಕರಣಗಳಲ್ಲಿ ಮಾತ್ರವೇ ಸೇವೆಯಿಂದ ಅಮಾನತುಗೊಳಿಸಬಹುದಾಗಿದೆ. ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಅವರ ವಿರುದ್ಧದ ಮ್ಯಾಜಿಸ್ಟ್ರೇಟ್ ತನಿಖೆ ಇನ್ನೂ ವಿಚಾರಣೆಗೆ ಬಾಕಿಯಿದೆ ಮತ್ತು ಅವರ ವಿರುದ್ಧ ಯಾವುದೇ ಪ್ರಾಥಮಿಕ ಸಾಕ್ಷ್ಯಗಳಿಲ್ಲ. ಹೀಗಾಗಿ ಅವರ ಅಮಾನತು ಅಸಮರ್ಥನೀಯ ಹಾಗೂ ಅದನ್ನು ತಳ್ಳಿಹಾಕಬೇಕಾಗಿದೆ ಎಂದು ಅವರು ತಿಳಿಸಿದ್ದರು.
2025ರ ಐಪಿಎಲ್ ಪಂದ್ಯಕೂಟದಲ್ಲಿ ಆರ್ಸಿಬಿ ಬೆಂಗಳೂರು ಕ್ರಿಕೆಟ್ ತಂಡವನ್ನು ಸನ್ಮಾನಿಸಲು ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೇರಿದ್ದ ಸಂದರ್ಭ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದರು ಹಾಗೂ 56 ಮಂದಿ ಗಾಯಗೊಂಡಿದ್ದರು.
ಕರ್ನಾಟಕ ಸರಕಾರವು ಈ ದುರಂತಕ್ಕೆ ಸಂಬಂಧಿಸಿ ಕರ್ತವ್ಯ ಲೋಪದ ಆರೋಪದಲ್ಲಿ ವಿಕಾಸ್ ಕುಮಾರ್ ವಿಕಾಸ್ ಜೊತೆಗೆ ಇತರ ಪೊಲೀಸ್ ಅಧಿಕಾರಿಗಳಾದ ಬಿ.ದಯಾನಂದ (ಬೆಂಗಳೂರು ನಗರ ಪೊಲೀಸ್ ಆಯುಕ್ತ ), ಶೇಖರ್ ಕೆ.ಟೆಕ್ಕನ್ನವರ್ (ಉಪ ಪೊಲೀಸ್ ಆಯುಕ್ತ, ಬೆಂಗಳೂರು ಕೇಂದ್ರ), ಸಿ. ಬಾಲಕೃಷ್ಣ (ಸಹಾಯಕ ಪೊಲೀಸ್ ಆಯುಕ್ತ, ಕಬ್ಬನ್ ಪಾರ್ಕ್) ಹಾಗೂ ಎ.ಕೆ. ಗಿರೀಶ್ (ಪೊಲೀಸ್ ನಿರೀಕ್ಷಕ, ಕಬ್ಬನ್ ಪಾರ್ಕ್) ಅವರನ್ನು ಕೂಡಾ ಅಮಾನತುಗೊಳಿಸಿತ್ತು.







