ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ: ಸಿಐಡಿ ವಿಚಾರಣೆಗೆ ಹಾಜರಾದ ಶಾಂತಾ ಹೊಸಮನಿ

ಕೆಪಿಎಸ್ಸಿ
ಬೆಂಗಳೂರು : ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ನಡೆಸಿದ್ದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಹಗರಣದ ಆರೋಪಿ ಹಾಗೂ ಕೆಪಿಎಸ್ಸಿ ಸದಸ್ಯೆ ಶಾಂತಾ ಹೊಸಮನಿ ಅವರು ಗುರುವಾರದಂದು ಅಪರಾಧ ತನಿಖಾ ಇಲಾಖೆಯ(ಸಿಐಡಿ) ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಪಶುವೈದ್ಯಾಧಿಕಾರಿಗಳ ಅಕ್ರಮ ನೇಮಕಾತಿ ಹಗರಣ ಬಹಿರಂಗವಾದ ಬೆನ್ನಲ್ಲೇ ಶಾಂತಾ ನಾಪತ್ತೆಯಾಗಿದ್ದರು. ವಿಚಾರಣೆ ಸಂಬಂಧ ಸಿಐಡಿ ಅಧಿಕಾರಿಗಳು ಅವರಿಗೆ ನೋಟಿಸ್ ನೀಡಿದ್ದರು. ಅಲ್ಲದೆ, ಆರೋಪಿಯ ಪತ್ತೆಗಾಗಿ ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲಿಯೂ ಶೋಧ ನಡೆಸಿದ್ದರು.
ಪಶುವೈದ್ಯರ ಅಕ್ರಮ ನೇಮಕಾತಿ ಸಂಬಂಧ ಮಮಿತಾ ಎಂಬ ಅಭ್ಯರ್ಥಿಯ ಜೊತೆ ಮೂರು ಬಾರಿ ಫೋನ್ ಮೂಲಕ ಕೆಪಿಎಸ್ಸಿ ಸದಸ್ಯೆ ಶಾಂತಾ ಹೊಸಮನಿ ಮಾತುಕತೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಜಾರಿ ನಿರ್ದೇಶನಾಲಯದ(ಈ.ಡಿ.) ಅಧಿಕಾರಿಗಳುಶಾಂತಾ ಹೊಸಮನಿ ಹಾಗೂ ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸೇರಿದಂತೆ ಪ್ರಮುಖರ ನಿವಾಸಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದರು. ನಂತರ ಸಿಐಡಿ ಅಧಿಕಾರಿಗಳೂ ಅವರ ನಿವಾಸದ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಇಷ್ಟೆಲ್ಲ ನಡೆದರೂ ಶಾಂತಾ ಹೊಸಮನಿ ಮಾತ್ರ ಅಧಿಕಾರಿಗಳ ಕೈಗೆ ಸಿಕ್ಕಿರಲಿಲ್ಲ. ಈಗ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆದ ಹಿನ್ನೆಲೆಯಲ್ಲಿ ಅವರು ಸಿಐಡಿ ವಿಚಾರಣಗೆ ಅವರು ಹಾಜರಾಗಿದ್ದಾರೆ.






