ಚಲನಚಿತ್ರ ಅಕಾಡೆಮಿಯ ‘ಸಿನಿ ಸಂವಾದ' ಕಾರ್ಯಾಗಾರಕ್ಕೆ ತೆರೆ

ಬೆಂಗಳೂರು : ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಆಯೋಜನೆಗೊಂಡಿದ್ದ ಮೂರು ದಿನಗಳ ‘ಸಿನಿ ಸಂವಾದ' ಕಾರ್ಯಕ್ರಮಕ್ಕೆ ತೆರೆಬಿದ್ದಿತು. ಅಕಾಡೆಮಿಯ ಈ ಚಲನಚಿತ್ರ ನಿರ್ಮಾಣ ತರಬೇತಿ ಕಾರ್ಯಾಗಾರ ಮತ್ತು ವಿಚಾರ ಸಂಕಿರಣದಲ್ಲಿ ರಾಜ್ಯದ ವಿವಿಧೆಡೆಯಿಂದ 200ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
ಕಾರ್ಯಾಗಾರದಲ್ಲಿ ಚಲನಚಿತ್ರದ ವಿವಿಧ ವಿಭಾಗಗಳಿಗೆ ಸಂಬಂಧಿಸಿದಂತೆ 13 ಗೋಷ್ಠಿಗಳು ಆಯೋಜನೆಗೊಂಡಿದ್ದವು. ಹಿರಿಯ ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾಸ್ಟರ್ ಕ್ಲಾಸ್ ನಡೆಸಿಕೊಟ್ಟರು.
ಇಲ್ಲಿನ ನಂದಿನಿ ಲೇಔಟ್‍ನಲ್ಲಿರುವ ಅಕಾಡೆಮಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಮಾಜಿ ಸಂಸದ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಉದ್ಘಾಟಿಸಿದರೆ, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಾಸಕ ಕೆ. ಗೋಪಾಲಯ್ಯ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ಸಾಧು ಕೋಕಿಲ, ವಾರ್ತಾ ಇಲಾಖೆ ಕಾರ್ಯದರ್ಶಿ ಮಂಜುನಾಥ್, ಅಕಾಡೆಮಿ ರಿಜಿಸ್ಟ್ರಾರ್ ವಿನೋದ್ ಚಂದ್ರ, ಅಕಾಡೆಮಿ ಸದಸ್ಯರು ಹಾಗೂ ಚಿತ್ರರಂಗದ ಗಣ್ಯರು ಪಾಲ್ಗೊಂಡಿದ್ದರು.
‘ಸಿನಿ ಸಂವಾದ'ದಲ್ಲಿ ಮಾತನಾಡಿದ ಪದ್ಮಶ್ರೀ ಪುರಸ್ಕೃ ತ ಹಿರಿಯ ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿ, ವಿಶ್ವ ಸಿನಿಮಾ ಮತ್ತು ಭಾರತೀಯ, ಕನ್ನಡ ಚಿತ್ರರಂಗದ ಕಥನಗಾರಿಕೆ ಹಾಗೂ ನಿರೂಪಣಾ ವಿಧಾನಗಳು ಬೆಳೆದುಬಂದ ಬಗೆ ಮತ್ತು ಪ್ರಮುಖ ಹೆಜ್ಜೆ ಗುರುತುಗಳು' ವಿಷಯ ಕುರಿತು ಮಾತನಾಡಿದರು.
ಅನಂತರ ನಡೆದ ‘ಸಮಕಾಲೀನ ಚಲನಚಿತ್ರರಂಗದ ಹಾಗೂ ಚಿತ್ರನಿರ್ಮಾಣದ ಸ್ಥಿತಿ-ಗತಿ' ಗೋಷ್ಠಿಯಲ್ಲಿ ಚಿತ್ರನಿರ್ದೇಶಕ ಟಿ.ಎಸ್.ನಾಗಾಭರಣ, ನಿರ್ಮಾಪಕ ಬಾಲಾಜಿ ವೀರಾಸ್ವಾಮಿ ಅವರೊಂದಿಗೆ ಶಿಬಿರಾರ್ಥಿಗಳು ಮುಕ್ತ ಮಾತುಕತೆ ನಡೆಸಿದರು.
ಹಿರಿಯ ಚಿತ್ರನಿರ್ದೇಶಕರಾದ ಎಸ್.ವಿ.ರಾಜೇಂದ್ರಸಿಂಗ್ ಬಾಬು, ಎಸ್.ನಾರಾಯಣ್, ಆರ್.ಎನ್. ನಂಜುಂಡೇಗೌಡ, ಪಿ.ಶೇಷಾದ್ರಿ, ಕಲಾನಿರ್ದೇಶಕರಾದ ಶಶಿಧರ ಅಡಪ ಮತ್ತು ಚೈತ್ರಾ ಪುತ್ತೂರಾಯ, ಸಂಗೀತ ಕ್ಷೇತ್ರದ ಕೆ.ಕಲ್ಯಾಣ್, ‘ಲಹರಿ' ಸಂಸ್ಥೆಯ ವೇಲು, ಟೆಲಿವಿಷನ್ ಮಾಧ್ಯಮ ತಜ್ಞರಾದ ಅನೂಪ್ ಚಂದ್ರಶೇಖರ್, ಸುಧೀಂದ್ರ ವೆಂಕಟೇಶ್, ಗಾಯಕ ಅನಿರುದ್ಧ ಶಾಸ್ತ್ರಿ, ಚಿತ್ರನಿರ್ದೇಶಕ ಟಿ.ಕೆ.ದಯಾನಂದ್ ಸೇರಿದಂತೆ ಹಲವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಾಗಾರದಲ್ಲಿ ಚಲನಚಿತ್ರ ನಿರ್ಮಾಣ, ನಿರ್ದೇಶನ, ಚಿತ್ರಕಥೆ, ನಟನೆ, ಛಾಯಾಗ್ರಹಣ, ನಿರೂಪಣಾ ವಿಧಾನ ಹಾಗೂ ಮಾದರಿ, ಸಂಗೀತ-ಸಾಹಿತ್ಯ, ಹಿನ್ನೆಲೆ ಸಂಗೀತ, ಸಂಕಲನ, ಸ್ಟುಡಿಯೋ ತಂತ್ರಜ್ಞಾನ, ಪೋಸ್ಟ್ ಪ್ರೊ ಡಕ್ಷನ್, ಲೊಕೇಶನ್ ಅನುಮತಿ, ಪ್ರೊತ್ಸಾಹ ಧನ ಪ್ರಕ್ರಿಯೆ, ಡಬ್ಬಿಂಗ್ ಹಕ್ಕು ಮತ್ತು ಕಾಪಿರೈಟ್ ಕಾನೂನು, ಡಬ್ಬಿಂಗ್ ಹಕ್ಕು, ಸಿನಿಮಾ ಪ್ರಚಾರ ಮಾರುಕಟ್ಟೆಯ ಸಾಧ್ಯತೆಗಳು ಮತ್ತು ಸವಾಲುಗಳ ಕುರಿತು ಚರ್ಚಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.






