ಎನ್ಎಲ್ಎಸ್ಐಯು 34ನೇ ವಾರ್ಷಿಕ ಘಟಿಕೋತ್ಸವ: ಮತ್ತೊಬ್ಬರ ಗೌರವಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಿ : CJI ಸೂರ್ಯಕಾಂತ್

ಬೆಂಗಳೂರು : ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ವೇಳೆ ಮತ್ತೊಬ್ಬರ ಗೌರವಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಸಲಹೆ ನೀಡಿದ್ದಾರೆ.
ಶನಿವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ(ಎನ್ಎಲ್ಎಸ್ಐಯು)ಯ 34ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಬೌದ್ಧಿಕ ಸ್ವಾತಂತ್ರ್ಯ ನ್ಯಾಯಸಮ್ಮತತೆ ಹಾಗೂ ವಿಭಿನ್ನ ಅಭಿಪ್ರಾಯಗಳನ್ನು ಗೌರವಿಸುವ ಗುಣವನ್ನು ಕಾನೂನು ಪದವೀಧರರು ಬೆಳೆಸಿಕೊಳ್ಳಬೇಕು ಎಂದರು.
ಕಾನೂನು ಶಿಕ್ಷಣದ ಉದ್ದೇಶವು ಅಪರಾಧ ಕಾನೂನು ಅಥವಾ ಸಂವಿಧಾನಾತ್ಮಕ ಕಾನೂನಿನ ತತ್ವಗಳನ್ನು ಕಲಿಯುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರುವ ಜನರನ್ನು ಅರ್ಥಮಾಡಿಕೊಳ್ಳುವುದು, ವಿಚಾರಗಳ ವಿನಿಮಯ ನಡೆಸುವುದು ಹಾಗೂ ತಮ್ಮ ನಿಲುವುಗಳನ್ನು ಮರುಪರಿಶೀಲಿಸುವುದೂ ಶಿಕ್ಷಣದ ಭಾಗವಾಗಿದೆ. ಜತೆಗೆ, ಕಾನೂನು ವೃತ್ತಿಗೆ ಕಾನೂನುಗಳ ವಿಧಿಗಳು ಮತ್ತು ನ್ಯಾಯಾಲಯದ ಪೂರ್ವನಿದರ್ಶನಗಳ ಜ್ಞಾನವಷ್ಟೇ ಸಾಲದು. ನ್ಯಾಯಯುತವಾದುದನ್ನು ಸಮರ್ಥಿಸುವ ಧೈರ್ಯ ಹಾಗೂ ಕಡೆಗಣಿಸಲ್ಪಟ್ಟವರ ಧ್ವನಿಗೆ ಕಿವಿಗೊಡುವ ವಿನಯ ಅತ್ಯಗತ್ಯ ಎಂದು ಅವರು ತಿಳಿಸಿದರು.
ಕಾನೂನು ಶಾಲೆಗಳಲ್ಲಿ ವಿಭಿನ್ನ ವಿಚಾರಗಳು ಮುಖಾಮುಖಿಯಾಗುತ್ತವೆ. ನಂಬಿಕೆಗಳು ಪರೀಕ್ಷೆಗೆ ಒಳಗಾಗುತ್ತವೆ ಮತ್ತು ಸಂವಾದದ ಮೂಲಕ ಹೊಸ ತಿಳುವಳಿಕೆ ಮೂಡುತ್ತದೆ. ವಿಭಿನ್ನ ಅಭಿಪ್ರಾಯಗಳನ್ನು ಆಲಿಸುವುದರಿಂದ ನ್ಯಾಯದ ಪರಿಕಲ್ಪನೆ ಇನ್ನಷ್ಟು ಸಮೃದ್ಧವಾಗುತ್ತದೆ. ಕಾನೂನು ಸ್ಥಿರವಾದುದಲ್ಲ. ಅದನ್ನು ಅಭ್ಯಾಸ ಮಾಡುವವರ ಚಿಂತನೆ ಮತ್ತು ಕಾರ್ಯಗಳ ಮೂಲಕ ಅದು ಉಸಿರಾಡುತ್ತದೆ, ವಿಕಸನಗೊಳ್ಳುತ್ತದೆ ಎಂದ ಅವರು, ವೃತ್ತಿಜೀವನದಲ್ಲಿ ಪ್ರಾಮಾಣಿಕತೆಯೇ ದೀರ್ಘಕಾಲದ ವಿಶ್ವಾಸ ಮತ್ತು ಗೌರವವನ್ನು ಗಳಿಸಿಕೊಡುತ್ತದೆ. ರಾಜಿ ಮಾಡಿಕೊಳ್ಳುವ ಆಮಿಷ ಎದುರಾಗಬಹುದು, ತಾತ್ಕಾಲಿಕ ಅನುಕೂಲಗಳು ಆಕರ್ಷಿಸಬಹುದು ಮತ್ತು ಇತರರು ಸುಲಭದ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಅಂತಹ ಸಂದರ್ಭಗಳಲ್ಲಿ ಈ ಸಂಸ್ಥೆಯಲ್ಲಿ ಕಲಿತ ಮೌಲ್ಯಗಳನ್ನು ಮಾರ್ಗದರ್ಶಿಯಾಗಿ ಸ್ವೀಕರಿಸಿ, ಅವುಗಳಿಗೆ ನಿಷ್ಠರಾಗಿರಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಕಾನೂನು ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಿಸಿದರು. ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಭಾರತೀಯ ವಕೀಲ ಪರಿಷತ್ತಿನ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ, ರಂಗಶಂಕರದ ಸಹಸಂಸ್ಥಾಪಕಿ, ನಟಿ ಅರುಂಧತಿ ನಾಗ್, ರಾಜ್ಯ ಸರಕಾರದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ರಾಷ್ಟ್ರೀಯ ಕಾನೂನು ಶಾಲೆಯ ಕುಲಪತಿ ಪ್ರೊ.ಸುಧೀರ್ ಕೃಷ್ಣಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.






