ಇನ್ನೆರೆಡು ದಿನಗಳಲ್ಲಿ ಮೋಡ ಬಿತ್ತನೆ ಸಾಧ್ಯತೆ: ಸಚಿವ ಚಲುವರಾಯಸ್ವಾಮಿ

ಬೆಂಗಳೂರು, ಆ.25: ರಾಜ್ಯದಲ್ಲಿ ಎದುರಾಗಿರುವ ಮಳೆ ಕೊರತೆ ನೀಗಿಸುವ ನಿಟ್ಟಿನಲ್ಲಿ ಮೋಡ ಬಿತ್ತನೆ ಕಾರ್ಯಕ್ಕೆ ವೇಗ ನೀಡಲಾಗಿದ್ದು, ಒಟ್ಟು ಮೂರು ಸಮಿತಿಗಳನ್ನು ಇಂದು ರಚಿಸಲಾಗುವುದು. ಈ ಸಂಬಂಧ ಈಗಾಗಲೇ ಎರಡು ಸಭೆಗಳನ್ನು ನಡೆಸಲಾಗಿದ್ದು, ಇಲಾಖೆಯ ಕಾರ್ಯದರ್ಶಿಗಳಿಗೂ ಸೂಚನೆ ನೀಡಲಾಗಿದೆ. ಇನ್ನೆರೆಡು ದಿನಗಳಲ್ಲಿ ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಲು ಪ್ರಯತ್ನಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
ವಿಧಾನಸೌಧದ ಮೂರನೇ ಮಹಡಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮಾನಿಟರಿಂಗ್ ಕಮಿಟಿ (ಮೇಲ್ವಿಚಾರಣಾ ಸಮಿತಿ), ಟೆಕ್ನಿಕಲ್ ಕಮಿಟಿ (ತಾಂತ್ರಿಕ ಸಮಿತಿ) ಹಾಗೂ ಫೀಲ್ಡ್ ಆಪರೇಷನ್ ಮತ್ತು ಇವ್ಯಾಲ್ಯೂಯೇಷನ್ ಕಮಿಟಿಗಳನ್ನು (ಕಾರ್ಯಾಚರಣೆ ಹಾಗೂ ಮೌಲ್ಯಮಾಪನ ಸಮಿತಿ) ರಚನೆಯಾಗಲಿದ್ದು, ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮೇಲ್ವಿಚಾರಣಾ ಸಮಿತಿಯ ಉಸ್ತುವಾರಿ ವಹಿಸಲಿದ್ದು, ತಾಂತ್ರಿಕ ಸಮಿತಿಯಲ್ಲಿ ಐಐಟಿ, ಐಐಎಸ್ಸಿ ಹಾಗೂ ಹವಾಮಾನ ಇಲಾಖೆಯ ತಜ್ಞರು ಇರಲಿದ್ದಾರೆ. ಇಂದು ಸಂಜೆಯೊಳಗೆ ಸಮಿತಿ ರಚನೆಯಾಗಲಿದೆ ಎಂದು ವಿವರಿಸಿದರು.
"ಇದುವರೆಗೆ ರಾಜ್ಯದಲ್ಲಿ ಮೂರು ಬಾರಿ ಮೋಡ ಬಿತ್ತನೆ ನಡೆಸಲಾಗಿದೆ. ಇದರಲ್ಲಿ ಶೇ. 18 ರಿಂದ 20 ರಷ್ಟು ಯಶಸ್ಸು ಸಿಕ್ಕಿದೆ. ನಮಗೆ ಶೇ. 30 ರಷ್ಟು ಯಶಸ್ಸಿನ ದರ ದೊರೆತರೆ ಇಡೀ ಯೋಜನೆ ಸಾರ್ಥಕವಾಗಲಿದೆ. ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಮುಂದಿನ ದಿನಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗುವ ಸಾಧ್ಯತೆಯಿದೆ. ಮಳೆಯಾದರೂ ನಿರಂತರವಾಗಿ ಸುರಿಯುವುದಿಲ್ಲ ಎಂಬ ವರದಿಗಳಿವೆ. ಹೀಗಾಗಿ ಮೋಡ ಬಿತ್ತನೆ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಮಳೆ ತರಿಸಬೇಕೆಂಬ ಜನರ ನಿರೀಕ್ಷೆಯನ್ನು ಈಡೇರಿಸುವುದು ಸರಕಾರದ ಕರ್ತವ್ಯವಾಗಿದ್ದು, ಮುಂದಿನ ಬೇಸಿಗೆಯನ್ನು ಸಮರ್ಥವಾಗಿ ಎದುರಿಸಲು ಸಿದ್ಧತೆ ನಡೆಸಲಾಗುತ್ತಿದೆ," ಎಂದರು.
"ನಾಲ್ಕು ಕಂದಾಯ ವಿಭಾಗಗಳಲ್ಲಿ ಜಲ ಸಂಪನ್ಮೂಲ ಇಲಾಖೆಯ ಮೂಲಕವೇ ಮೋಡ ಬಿತ್ತನೆ ಕೈಗೊಳ್ಳಲಾಗುವುದು. ಮೋಡ ಬಿತ್ತನೆ ಮಾಡಿದ 15 ಕಿ.ಮೀ ವ್ಯಾಪ್ತಿಯಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಎಲ್ಲಿ ಸೂಕ್ತ ಮೋಡಗಳಿರುತ್ತವೆಯೋ ಅಲ್ಲಿ ಮಾತ್ರ ಬಿತ್ತನೆ ಸಾಧ್ಯ. ಹೀಗಾಗಿ ರಾಜ್ಯಾದ್ಯಂತ ಮೋಡಗಳ ಲಭ್ಯತೆಯ ಆಧಾರದ ಮೇಲೆ ಪ್ರಕ್ರಿಯೆ ನಡೆಯಲಿದೆ."
ಅಂದಾಜು 27 ಕೋಟಿ ರೂ., ವೆಚ್ಚದಲ್ಲಿ 60 ದಿನಗಳ ಕಾಲ (ಸುಮಾರು 200 ಗಂಟೆ) ಮೋಡ ಬಿತ್ತನೆ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾರ್ಯಾಚರಣೆ ಇರಲಿದೆ. ಸೆಪ್ಟಂಬರ್ ತಿಂಗಳಲ್ಲಿ ದಟ್ಟ ಮೋಡಗಳು ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದು, ಅಕ್ಟೋಬರ್ ನಲ್ಲಿ ಪ್ರಮಾಣ ಕಡಿಮೆಯಾಗಲಿದೆ. ಹೀಗಾಗಿ ಪ್ರಸಕ್ತ ಸಮಯ ಮೋಡ ಬಿತ್ತನೆಗೆ ಅತ್ಯಂತ ಸೂಕ್ತವಾಗಿದೆ ಎಂದು ಸಚಿವರು ತಿಳಿಸಿದರು.
"ಸರ್ಕಾರಕ್ಕೆ ಆರ್ಥಿಕ ಹೊರೆಯಾದರೂ ಚಿಂತೆಯಿಲ್ಲ; ಜನ-ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ. ಬೇಸಿಗೆಯಲ್ಲಿ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದ್ದು, ಕೆರೆ-ಕುಂಟೆಗಳನ್ನು ತುಂಬಿಸಿ ಖುಷ್ಕಿ ಭೂಮಿಯ ಕೃಷಿಗೂ ನೆರವಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ," ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಶಾಸಕ ಪ್ರಕಾಶ್ ಕೋಳಿವಾಡ ಸೇರಿದಂತೆ ಹವಮಾನ ಇಲಾಖೆ, ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಹಾಜರಿದ್ದರು.






