ಪ್ರಧಾನಿಯವರನ್ನು ಸ್ವಾಗತಿಸಿ, ರಾಜ್ಯದ ವಿಚಾರ ಪ್ರಸ್ತಾಪ : ಸಿಎಂ ಡಿ.ಕೆ.ಶಿವಕುಮಾರ್
-ಪಿಂಕ್ ಲೈನ್ ಉದ್ಘಾಟನೆ ಕರ್ನಾಟಕದ ಹೆಮ್ಮೆ -ಕೆಲ ವಿಷಯಗಳ ಚರ್ಚಿಸಲು ಪ್ರಧಾನಿ ಸಮಯ ಕೇಳಿರುವೆ

ಬೆಂಗಳೂರು : ಪ್ರಧಾನಿ ಮೋದಿಯವರು ಕರ್ನಾಟಕ ರಾಜ್ಯಕ್ಕೆ ಬರುತ್ತಿದ್ದು, ನಾವು ಅವರನ್ನು ಗೌರವಯುತವಾಗಿ ಸ್ವಾಗತಿಸಿ, ಗೌರವಯುತವಾಗಿ ನಮ್ಮ ರಾಜ್ಯದ ವಿಚಾರವನ್ನು ಪ್ರಸ್ತಾಪಿಸುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಗುರುವಾರ ವಿಕಾಸಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪ್ರಧಾನಿ ಮೋದಿ ಕರ್ನಾಟಕ ರಾಜ್ಯಕ್ಕೆ ಬರುತ್ತಿರುವ ಗೌರವದ ವಿಚಾರ. ಹೀಗಾಗಿ ಅವರು ನಮಗೆ ಸಹಕಾರ ನೀಡಬೇಕು, ನಾವು ಅವರಿಗೆ ಸಹಕಾರ ನೀಡಬೇಕು ಎಂದು ಹೇಳಿದರು.
ಪಿಂಕ್ ಲೈನ್ ಉದ್ಘಾಟನೆ ಕರ್ನಾಟಕದ ಹೆಮ್ಮೆ: ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಿಂಕ್ ಲೈನ್ ಉದ್ಘಾಟನೆ ಕರ್ನಾಟಕದ ಹೆಮ್ಮೆಯ ವಿಚಾರವಾಗಿದ್ದು, ಇದರ ಉದ್ಘಾಟನೆಗೆ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಹಲವು ವಿಚಾರಗಳು ಇನ್ನೂ ಬಾಕಿ ಇವೆ. ಅಭಿವೃದ್ಧಿಯ ದೃಷ್ಟಿಯಿಂದ ಸಾಕಷ್ಟು ಕೆಲಸಗಳು ಆಗಬೇಕಿವೆ. ಮೈಸೂರಿನಲ್ಲಿಯೂ ಕೆಲವು ಕಾರ್ಯಕ್ರಮಗಳಿದ್ದು, ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂಬ ವಿಶ್ವಾಸವಿದೆ ಎಂದು ಅವರು ತಿಳಿಸಿದರು.
ಪ್ರಧಾನಿಗಳ ಸಮಯ ಕೇಳಿರುವೆ: ಬರ ಪರಿಹಾರದ ಸೇರಿದಂತೆ ರಾಜ್ಯಕ್ಕೆ ಸಂಬಂಧಪಟ್ಟ ವಿಚಾರಗಳ ಕುರಿತು ನಾನು ಪ್ರಾಮಾಣಿಕವಾಗಿ ಮೋದಿಯವರಿಗೆ ಮನವಿ ಮಾಡುತ್ತೇವೆ. ಆದರೆ ನಾನು ಅವರೊಂದಿಗೆ ಏನು ಚರ್ಚೆ ಮಾಡುತ್ತೇನೆ ಎಂಬುದನ್ನು ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ. ಖಾಸಗಿಯಾಗಿ ಕೆಲ ವಿಚಾರಗಳ ಚರ್ಚೆ ಮಾಡಲು ಸಮಯ ಕೇಳಿದ್ದು, ಅವರು ದಿಲ್ಲಿಗೆ ಆಗಮಿಸುವಂತೆ ತಿಳಿಸಿದ್ದಾರೆ ಎಂದು ಶಿವಕುಮಾರ್ ಮಾಹಿತಿ ನೀಡಿದರು.




