ಪರ್ಯಾಯ ರಾಜಕಾರಣಕ್ಕೆ ದಲಿತರು, ಹಿಂದುಳಿದ ವರ್ಗಗಳು, ಮುಸ್ಲಿಮರು ಒಂದಾಗಬೇಕು : ಸಿ.ಎಂ.ಇಬ್ರಾಹಿಂ

ಬೆಂಗಳೂರು : ರಾಜ್ಯದಲ್ಲಿ ಪರ್ಯಾಯ ರಾಜಕಾರಣವನ್ನು ಸೃಷ್ಟಿ ಮಾಡುವ ನಿಟ್ಟಿನಲ್ಲಿ ದಲಿತರು, ಹಿಂದುಳಿದ ವರ್ಗಗಳು, ಮುಸ್ಲಿಮರು ಹಾಗೂ ರೈತರು ಒಂದಾಗಬೇಕಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಸೋಮವಾರ ಇಲ್ಲಿನ ಕ್ವೀನ್ಸ್ ರಸ್ತೆಯಲ್ಲಿರುವ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ವತಿಯಿಂದ ಆಯೋಜಿಸಿದ್ದ ಪ್ರೊ. ಬಿ. ಕೃಷ್ಣಪ್ಪರ 87ನೇ ಜನ್ಮ ದಿನಾಚಾರಣೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸ್ವತಂತ್ರ ರಾಜಕಾರಣವನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಎಸ್‍ಸಿ, ಎಸ್ಟಿ, ಒಬಿಸಿ ಸಮುದಾಯಗಳು ಸಂಘಟಿರಾಗಬೇಕು ಎಂದು ತಿಳಿಸಿದರು.
ಆರ್‌ಸಿಬಿ ತಂಡವು ಐಪಿಎಲ್‍ನಲ್ಲಿ ವಿಜಯವನ್ನು ಸಾಧಿಸಿದೆ. ಹೀಗಾಗಿ ನಗರದಲ್ಲಿ ಆರ್‌ಸಿಬಿ ತಂಡಕ್ಕೆ ಅಭಿನಂದನೆ ಸಲ್ಲಿಸಲು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ 11 ಜನರ ಸತ್ತಿದ್ದಾರೆ. ಆದುದರಿಂದ ಸರಕಾರವು ಐಪಿಎಲ್ ಪಂದ್ಯಗಳನ್ನು ರದ್ದುಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಈಗಿರುವ ಕೇಂದ್ರ ಸರಕಾರ ಜನವಿರೋಧಿಯಾಗಿ ಕೆಲಸ ಮಾಡುತ್ತಿದೆ. ಮೀಸಲಾತಿಯನ್ನು ಸಂಪೂರ್ಣವಾಗಿ ರದ್ದು ಮಾಡುವ ಸಲುವಾಗಿ ಖಾಸಗೀಕರಣವನ್ನು ಜಾರಿಗೆ ತಂದಿದೆ. ಇಂತಹ ಸಂದರ್ಭದಲ್ಲಿ ದಲಿತರು ಒಂದಾಗುವ ಮೂಲಕ ಪರ್ಯಾಯ ರಾಜಕಾರಣವನ್ನು ಹುಟ್ಟು ಹಾಕಬೇಕು ಎಂದು ಹೇಳಿದರು.
ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೇಟ್ ಇನ್ ಇಂಡಿಯಾದ(ಬಿಬಿಸಿಐ) ಅಧ್ಯಕ್ಷ ಜಯ್ ಶಾ ಅವರು ಐಪಿಎಲ್‍ನ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಒಂದು ಕೋಟಿ ರೂ.ಗಳನ್ನು ಪರಿಹಾರವಾಗಿ ನೀಡಬೇಕು. ಹಾಗೆಯೇ ಐಪಿಎಲ್ ಪಂದ್ಯಗಳನ್ನು ರದ್ದುಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ(ಭೀಮವಾದ) ರಾಜ್ಯಾಧ್ಯಕ್ಷ ಡಾ. ಮೋಹನ್ ರಾಜ್ ಮಾತನಾಡಿ, ದಲಿತ ಮುಖಂಡ ಪ್ರೊ. ಬಿ. ಕೃಷ್ಣಪ್ಪ ಅವರ ಆಶಯಗಳನ್ನು ನಾವು ಈಡೇರಿಸಬೇಕಾಗಿದೆ. ಬಹುಜನರು ಸಂಘಟರಾಗುವ ಮೂಲಕ ಪರ್ಯಾಯ ರಾಜಕಾರಣದ ಕಡೆಗೆ ಹೆಜ್ಜೆ ಹಾಕಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಸ್ವಪ್ನ ಮೋಹನ್, ಕೆ.ಎಂ. ಶ್ರೀನಿವಾಸ್, ಕೆ.ಬಿ. ರಾಜು ಸೇರಿದಂತೆ ಮತ್ತಿತರರು ಇದ್ದರು.