ಸಿದ್ದರಾಮಯ್ಯ ಅವರು ಪರ್ಯಾಯ ಅಹಿಂದ ನಾಯಕನ್ನು ಬೆಳೆಸಲು ಮುಂದಾಗಬೇಕು : ಸಿ.ಎಂ.ಇಬ್ರಾಹಿಂ

ಬೆಂಗಳೂರು : ಹಿಂದುಳಿದ ವರ್ಗಗಳ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಅಹಿಂದ ನಾಯಕನನ್ನು ಬೆಳೆಸಿ ಅವರಿಗೆ ಹಿಂದುಳಿದ ವರ್ಗಗಳ ರಥ ಎಳೆಯಲು ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದರು.
ಗಾಂಧಿ ಭವನದಲ್ಲಿ ನಡೆದ ರಾಷ್ಟ್ರೀಯ ಹಿಂದುಳಿದ ಸಂಘಟನೆಯ ಜನ ಜಾಗೃತಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ಕುರುಬರು ಹಿಂದುಳಿದ ವರ್ಗಕ್ಕೆ ಸೀಮಿತವಾಗಿಲ್ಲ, ಉಪ್ಪಾರ, ನೇಕಾರ, ಈಡಿಗ ಸಮುದಾಯ ಸೇರಿದಂತೆ ಸಣ್ಣ ಸಮುದಾಯಗಳಿವೆ. ಈ ಸಮುದಾಯದ ನಾಯಕರನ್ನು ಹಿಂದುಳಿದ ವರ್ಗಗಳ ನಾಯಕರನ್ನಾಗಿ ಬೆಳೆಸುವಲ್ಲಿ ತಮ್ಮ ಆಸಕ್ತಿಯನ್ನು ಸಿದ್ಧರಾಮಯ್ಯ ತೋರಬೇಕೆಂದು ತಿಳಿಸಿದರು.
ರಾಷ್ಟ್ರೀಯ ಅಹಿಂದ ಸಂಘಟನೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಂಘಟನೆಯಾಗುವ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಇನ್ನೊಬ್ಬ ಅಹಿಂದ ನಾಯಕನನ್ನು ಬೆಳಸುವ ಅಗತ್ಯತೆ ಸಂಘಟನೆಯಿಂದ ಆಗಬೇಕಿದೆ ಎಂದರು.
ಅಹಿಂದ ಮುಖಂಡ, ಸಂಘಟನೆ ರಾಜ್ಯಾಧ್ಯಕ್ಷ ಮುತ್ತಣ್ಣ ಎಸ್.ಶಿವಳ್ಳಿ ಮಾತನಾಡಿ, ಮುಂದಿನ ದಿನಗಳಲ್ಲಿ 2028ರ ಚುನಾವಣಾ ವೇಳೆಗೆ ಅಹಿಂದ ನಾಯಕನ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ಮತ್ತೆ ಅಧಿಕಾರಕ್ಕೆ ಬರಬೇಕಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಅಹಿಂದ ಸಂಘಟನೆ ತನ್ನ ಕಾರ್ಯವನ್ನು ನಿರ್ವಹಿಸಲಿದೆ. ಇದರ ನೇತೃತ್ವವನ್ನು ಸಿ.ಎಂ.ಇಬ್ರಾಹಿಂ ವಹಿಸಲಿದ್ದಾರೆ ಎಂದು ಹೇಳಿದರು.
ಅಹಿಂದ ಮುಖಂಡ ಲೋಹಿತ್ ನಾಯಕ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕಾರಣದ ಸಂದ್ಯಾ ಕಾಲದಲ್ಲಿದ್ದಾರೆ. ಮತ್ತೊಬ್ಬ ಪರ್ಯಾಯ ಹಿಂದುಳಿದ ವರ್ಗಗಳ ನಾಯಕನ ಬೆಳವಣಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.
ಸಮಾರಂಭದಲ್ಲಿ ಅಹಿಂದ ಮುಖಂಡ ಮದನ್, ದೇವರಾಜು ಅರಸು ಮರಿ ಮೊಮ್ಮಗ ಸಮೃದ್ಧ ಸೂರಜ್ ಹೆಗಡೆ, ಮಹಿಳಾ ಘಟಕ ಅಧ್ಯಕ್ಷೆ ಸುಶೀಲಾ ಕೆ.ಎಂ. ,ಕವಿತಾ ಬಿ.ನಾಯಕ, ಹನುಮಂತಪ್ಪ ಅರಸನಕೇರಿ ಸೇರಿದಂತೆ ಮತ್ತಿತರ ನಾಯಕರು ಭಾಗವಹಿಸಿದ್ದರು.






