‘ಜಿಎಸ್ಟಿ ನೋಂದಣಿ ಕಡ್ಡಾಯ’ | ಸಣ್ಣ ವ್ಯಾಪಾರಿಗಳಿಂದ ಹಳೆಯ ತೆರಿಗೆ ಬಾಕಿ ವಸೂಲು ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ
ಜು.25ರಂದು ಸಣ್ಣ ವರ್ತಕರು ಕರೆ ನೀಡಿದ್ದ ಪ್ರತಿಭಟನೆ ವಾಪಸ್

ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ವಾಣಿಜ್ಯ ತೆರಿಗೆ ಇಲಾಖೆಯಿಂದ ಜಿಎಸ್ಟಿ ನೋಟಿಸ್ ಪಡೆದಿರುವ ಸಣ್ಣ ವ್ಯಾಪಾರಿಗಳಿಂದ ಹಳೆಯ ತೆರಿಗೆ ಬಾಕಿ ವಸೂಲು ಮಾಡುವುದಿಲ್ಲ. ಆದರೆ, ನೋಟಿಸ್ ಪಡೆದವರು ಕಡ್ಡಾಯವಾಗಿ ಜಿಎಸ್ಟಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಣ್ಣ ವ್ಯಾಣಿಜ್ಯೋದ್ಯಮಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೀಡಿರುವ ಜಿಎಸ್ಟಿ ನೊಟೀಸ್ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಯುಪಿಐ ಅಡಿ 40 ಲಕ್ಷ ರೂ.ಗಳಿಗಿಂತ ಹೆಚ್ಚಿನ ವಹಿವಾಟು ನಡೆಸುವವರಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್ ನೀಡಲಾಗಿತ್ತು. ಅಲ್ಲದೇ, ಮೂರು ವರ್ಷಗಳ ಬಾಕಿ ತೆರಿಗೆ ಪಾವತಿ ಮಾಡುವುದು ಸೇರಿದಂತೆ ಕೆಲ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಆ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಸಣ್ಣ ವ್ಯಾಪಾರಿಗಳಲ್ಲಿ ಜಿಎಸ್ಟಿ ನೋಟಿಸ್ ಕುರಿತು ಗೊಂದಲ ಇದೆ. ಸಾಲದ ಮೊತ್ತ ಕೂಡಾ ಇದರಲ್ಲಿ ಸೇರಿಕೊಂಡಿದೆ. ವೈಯಕ್ತಿಕ ವಹಿವಾಟು ಹಣ ಸಹ ಇದರಲ್ಲಿ ಸೇರಿದೆ. ಜಿಎಸ್ಟಿ ನೋಟಿಸ್ ನೀಡುವುದು ತಪ್ಪಲ್ಲ. ಆದರೆ ವ್ಯಾಪಾರಿಗಳಿಗೆ ಪರಿಹಾರ ತೆರಿಗೆ ಪಾವತಿಸಲು ಅವಕಾಶ ನೀಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಮಧ್ಯವರ್ತಿಗಳಿಗೆ ಅವಕಾಶ ನೀಡದೆ, ವ್ಯಾಪಾರಿಗಳು ನೇರವಾಗಿ ವಾಣಿಜ್ಯ ತೆರಿಗೆ ಇಲಾಖೆಯನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಕೆಲವು ಪ್ರತಿನಿಧಿಗಳು ಮನವಿ ಮಾಡಿದ್ದಾರೆ. ಅದರ ಜೊತೆಗೆ, ಸಣ್ಣ ವ್ಯಾಪಾರಿಗಳಿಗೆ ನೆರವಾಗುವಂತೆ ಸಹಾಯವಾಣಿ ಆರಂಭಿಸಬೇಕು ಎಂದು ಕೋರಿದ್ದಾರೆ. ಈಗಾಗಲೇ, ಸಹಾಯವಾಣಿ ಇದ್ದು, ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವುದಾಗಿ ಮುಖ್ಯಮಂತ್ರಿ ತಿಳಿಸಿದರು.
ಜಿಎಸ್ಟಿ ಕುರಿತು ಸರಿಯಾಗಿ ಮಾಹಿತಿ ಇಲ್ಲದ ಕಾರಣ ಗೊಂದಲ ಉಂಟಾಗಿದೆ. ಜಾಗೃತಿ ಕಾರ್ಯಕ್ರಮ ಕೈಗೊಳ್ಳಬೇಕು. ಒಂದು ಬಾರಿಗೆ ಹಳೆಯ ಬಾಕಿಯನ್ನು ಮನ್ನಾ ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆ, ಎಫ್ಕೆಸಿಸಿಐ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳ ನೆರವಿನೊಂದಿಗೆ ಜಿಎಸ್ಟಿ ಕುರಿತು ಜಾಗೃತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಹಾಲು, ತರಕಾರಿ, ಮಾಂಸ, ಹಣ್ಣಿನಂತಹ ಅಗತ್ಯ ಆಹಾರ ವಸ್ತುಗಳಿಗೆ ತೆರಿಗೆ ವಿನಾಯಿತಿ ಇದ್ದು, ಅಂತಹ ವ್ಯಾಪಾರಿಗಳಿಗೆ ನೋಟಿಸ್ ಕೊಟ್ಟಿದ್ದರೂ, ಅವರಿಂದ ತೆರಿಗೆ ವಸೂಲು ಮಾಡುವುದಿಲ್ಲ. ಆದರೆ ಯಾರು ಕಾಯ್ದೆ ಪ್ರಕಾರ ತೆರಿಗೆ ಕಟ್ಟಬೇಕಾಗಿದೆಯೋ ಅವರು ಕಟ್ಟಬೇಕು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ಯುಪಿಐ ವಹಿವಾಟು ಕೈಬಿಟ್ಟರೆ ಸಣ್ಣ ವ್ಯಾಪಾರಿಗಳ ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ. ರಾಜ್ಯದಲ್ಲಿ ಕೇವಲ 9 ಸಾವಿರ ವ್ಯಾಪಾರಿಗಳಿಗೆ ಕಳೆದ 2-3 ವರ್ಷಗಳ ಅವಧಿಗೆ ಸಂಬಂಧಿಸಿದಂತೆ 18 ಸಾವಿರ ನೋಟಿಸ್ ಜಾರಿಗೊಳಿಸಲಾಗಿದೆ. ವ್ಯಾಪಾರ ವಹಿವಾಟು ಗಳನ್ನು ಕಾನೂನು ಬದ್ಧವಾಗಿ ಸರಕಾರ ಎಲ್ಲ ನೆರವು ನೀಡಲಿದೆ. ತೆರಿಗೆ ಸರಿಯಾಗಿ ಪಾವತಿಸಲು ಸಹಕಾರ ನೀಡಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ವ್ಯಾಪಾರಿಗಳಿಗೆ ತೊಂದರೆ ನೀಡಬೇಕೆಂಬುವುದು ಸರಕಾರದ ಉದ್ದೇಶವಲ್ಲ. ಸರಕಾರ ಸಣ್ಣ ವ್ಯಾಪಾರಿಗಳ ಪರವಾಗಿದೆ. ಜಿಎಸ್ಟಿ ತೆರಿಗೆಯನ್ನು ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯ ಜಿಎಸ್ಟಿ ಕೌನ್ಸಿಲ್ ನಿರ್ಧರಿಸುತ್ತದೆ. ಈ ತೆರಿಗೆ ಸಂಗ್ರಹದಲ್ಲಿ ಶೇ.50ರಷ್ಟನ್ನು ರಾಜ್ಯಕ್ಕೆ ನೀಡಲಾಗುತ್ತದೆ. ದೇಶದಲ್ಲೇ ಕರ್ನಾಟಕ ಜಿಎಸ್ಟಿ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಜು.25ರಂದು ಹೊಸದಿಲ್ಲಿಗೆ: ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಸಲಹಾ ಸಮಿತಿಯ ಸಭೆಯು ಜು.25ರಂದು ಹೊಸದಿಲ್ಲಿಯಲ್ಲಿರುವ ತಾಲ್ಕೋಟರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಸಲಹಾ ಸಮಿತಿಯಲ್ಲಿ ನಾನು ಒಬ್ಬ ಸದಸ್ಯನಾಗಿರುವುದರಿಂದ ಆ ಸಭೆಯಲ್ಲಿ ಭಾಗವಹಿಸಲು ಹೊಸದಿಲ್ಲಿಗೆ ತೆರಳುತ್ತಿದ್ದೇನೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ, ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರು, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ವರ್ತಕರ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಎಫ್ಕೆಸಿಸಿಐ ಪ್ರತಿನಿಧಿಗಳು ಭಾಗವಹಿಸಿದ್ದರು.
ಪ್ರತಿಭಟನೆ ವಾಪಾಸ್ :
ಜಿಎಸ್ಟಿ ನೋಟಿಸ್ ವಿಚಾರವಾಗಿ ಸಣ್ಣ ವರ್ತಕರು ಜು.25ರಂದು ವಹಿವಾಟು ಸ್ಥಗಿತ ಮಾಡಿ, ಫ್ರೀಡಂ ಪಾರ್ಕ್ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಹಿಂಪಡೆಯುವಂತೆ ಸರಕಾರ ಮಾಡಿದ ಮನವಿಗೆ ವರ್ತಕರು ಸ್ಪಂದಿಸಿದ್ದ, ಬಂದ್ ಹಿಂಪಡೆಯುವುದಾಗಿ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಣ್ಣ ವರ್ತಕರಿಗೆ ಜಿಎಸ್ಟಿ ನೋಟಿಸ್ಗಳನ್ನು ನೀಡಿರುವುದರಲ್ಲಿ ಕೇಂದ್ರ ಸರಕಾರದ ಪಾತ್ರವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಹ್ಲಾದ್ ಜೋಶಿ ಸುಳ್ಳು ಹೇಳುತ್ತಿದ್ದಾರೆ. ಜಿಎಸ್ಟಿ ಹಾಕುವವರು ಕೇಂದ್ರ ಸರಕಾರ, ಅದನ್ನು ವಸೂಲು ಮಾಡುವವರು ನಾವು. ಜಿಎಸ್ಟಿ ಹಾಕಿದ ಬಳಿಕ ತಾನೆ ನೋಟಿಸ್ ನೀಡಿರುವುದು? ಈ ಬಗ್ಗೆ ಅವರಿಗೆ ಜವಾಬ್ದಾರಿ ಇಲ್ಲವೇ? ಎಂದು ತಿರುಗೇಟು ನೀಡಿದರು.
ತಲಾ ಆದಾಯ ಹೆಚ್ಚಳದಲ್ಲಿ ‘ಗ್ಯಾರಂಟಿ’ ಪಾಲು ಇದೆ
ಕರ್ನಾಟಕವು ದೇಶದಲ್ಲೆ ಅತ್ಯಧಿಕ ತಲಾ ಆದಾಯವಿರುವ ರಾಜ್ಯವಾಗಿ ಹೊರಹೊಮ್ಮುವಲ್ಲಿ ನಮ್ಮ ಸರಕಾರದ ‘ಗ್ಯಾರಂಟಿ’ ಯೋಜನೆಗಳ ಪಾಲು ಇದೆ. ರಾಜ್ಯದ ತಲಾ ಆದಾಯ 2.05 ಲಕ್ಷ ರೂ.ಗಳಿಗೆ ತಲುಪಿರುವುದನ್ನು ಕೇಂದ್ರ ಸರಕಾರವೆ ಒಪ್ಪಿಕೊಂಡಿದೆ. ಇದೀಗ ತಲಾ ಆದಾಯದಲ್ಲಿ ನಾವು ದೇಶದಲ್ಲೆ ಪ್ರಥಮ ಸ್ಥಾನದಲ್ಲಿದ್ದೇವೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ







