ಬ್ಯಾರಿಗಳು ಎಲ್ಲೇ ಇದ್ದರೂ ತಮ್ಮ ಅಸ್ಮಿತೆ ಬಿಟ್ಟು ಕೊಡುವುದಿಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಬ್ಯಾರಿಗಳೆಲ್ಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸ ಮಾಡಿ, ದೇಶದ ಅನೇಕ ಭಾಗಗಳಿಗೆ ಹೋಗಿ ಕೆಲಸ ಮಾಡುವವರು. ನೀವು ಯಾವುದೇ ದೇಶದಲ್ಲಿದ್ದರೂ ನಿಮ್ಮ ಸಂಸ್ಕೃತಿ, ಅಸ್ಮಿತೆ ಬಿಟ್ಟುಕೊಟ್ಟಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರವಿವಾರ ನಗರದ ಅರಮನೆ ಮೈದಾನದಲ್ಲಿ ಬ್ಯಾರೀಸ್ ಸೆಂಟ್ರಲ್ ಕಮಿಟಿ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಬ್ಯಾರಿ ಕೂಟದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬ್ಯಾರಿಗಳು ಜಾತ್ಯತೀತರು. ಇವರಿಗೆ ಯಾವುದೇ ಜಾತಿ ವ್ಯಾಮೋಹ, ಧರ್ಮದ ವ್ಯಾಮೋಹವಾಗಲಿ ಇಲ್ಲ. ಬೆಸ್ತರ ಜೊತೆ ಇದ್ದರೆ ಮೀನುಗಾರರಾಗಿರುತ್ತಾರೆ. ಕೊಂಕಣಿಯವರ ಜೊತೆ ಇದ್ದರೆ ಕೊಂಕಣಿಗಳಾಗಿರುತ್ತಾರೆ. ಬಂಟರ ಜೊತೆ ಇದ್ದರೆ ರೈತರಾಗಿರುತ್ತಾರೆ ಎಂದು ಅವರು ತಿಳಿಸಿದರು.
ಒಂದು ಕಾಲದಲ್ಲಿ ಹೆಣ್ಣು ಮಕ್ಕಳು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡುವ ಕೆಲಸ ಬ್ಯಾರಿಗಳು ಮಾಡುತ್ತಿದ್ದಾರೆ. ಪುರುಷರು ಹಾಗೂ ಮಹಿಳೆಯರು ಸುಶಿಕ್ಷಿತರಾದರೆ ಮಾತ್ರ ಲಿಂಗ ತಾರತಮ್ಯ ಹೋಗಲಾಡಿಸಲು ಸಾಧ್ಯ. ಯಾರೇ ನಿಮ್ಮನ್ನು ವಿಭಜಿಸಲು ಯತ್ನಿಸಿದರೂ ನೀವು ಸಂಘಟಿತಾಗಿ ಉಳಿಯಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.
ಬ್ಯಾರಿ ಅಕಾಡಮಿಗೆ 3 ಕೋಟಿ ರೂ., ಹಜ್ ಭವನಕ್ಕೆ 10 ಕೋಟಿ ರೂ. ನೀಡಿದ್ದೇನೆ. ಯು.ಟಿ.ಖಾದರ್ ಅವರನ್ನು ವಿಧಾನಸಭೆಯ ಅಧ್ಯಕ್ಷ ಮಾಡಿದ್ದೇವೆ. ಅವರು ನಿಷ್ಪಕ್ಷವಾಗಿ ಅಧ್ಯಕ್ಷ ಸ್ಥಾನಕ್ಕೆ ಗೌರವ ಬರುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ.ಖಾದರ್, ಮುಖ್ಯಮಂತ್ರಿಯ ಕಾರ್ಯದರ್ಶಿ ನಸೀರ್ ಅಹ್ಮದ್, ಬ್ಯಾರೀಸ್ ಸೆಂಟ್ರಲ್ ಕಮಿಟಿ ಅಧ್ಯಕ್ಷ ಶಬ್ಬೀರ್ ಬ್ರಿಗೇಡ್, ರಾಜ್ಯ ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಯು.ಎಚ್.ಉಮರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ನಿವೃತ್ತ ಡಿಸಿಪಿ ಜಿ.ಎ.ಬಾವಾ ಇನ್ನಿತರರು ಉಪಸ್ಥಿತರಿದ್ದರು.
ಧರ್ಮ ಬೇರೆಯಾಗಿದ್ದರೂ ಇನ್ನೊಂದು ಸಮುದಾಯಗಳೊಂದಿಗೆ ಹೊಂದಿಕೊಂಡು, ತಮ್ಮ ಸಂಸ್ಕೃತಿ ಉಳಿಸಿಕೊಳ್ಳುವುದು ಬಹಳ ದೊಡ್ಡ ಕೆಲಸ. ಬ್ಯಾರಿಗಳು ಮೂಲತಃ ವ್ಯಾಪಾರಿಗಳು. ಎಲ್ಲ ಕಡೆ ಕೆಲಸ ಮಾಡುತ್ತಾರೆ. ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುತ್ತಿರುವುದು ಶ್ಲಾಘನೀಯ.
-ಸಿದ್ದರಾಮಯ್ಯ, ಮುಖ್ಯಮಂತ್ರಿ







