ಬ್ರೇಕ್ಫಾಸ್ಟ್ ಸಭೆಯಲ್ಲಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ; ಸಭೆಯ ಬಳಿಕ ಭಾವುಕರಾದ ಸಚಿವ ಸಂತೋಷ್ ಲಾಡ್

ಸಚಿವ ಸಂತೋಷ್ ಲಾಡ್ (Credit: X)
ಬೆಂಗಳೂರು, ಮೇ 28: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸ ‘ಕಾವೇರಿ’ಯಲ್ಲಿ ಗುರುವಾರ ನಡೆದ ಮಹತ್ವದ ಬ್ರೇಕ್ಫಾಸ್ಟ್ ಸಭೆಯಲ್ಲಿ ಭಾವನಾತ್ಮಕ ವಾತಾವರಣ ನಿರ್ಮಾಣವಾಗಿತ್ತು ಎಂದು ಮೂಲಗಳು ತಿಳಿಸಿವೆ. ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳ ನಡುವೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾವುಕರಾಗಿ ಕಣ್ಣೀರು ಹಾಕಿದರು. ಈ ಕ್ಷಣಕ್ಕೆ ಸಚಿವರು ಸಾಕ್ಷಿಯಾದರು ಎನ್ನಲಾಗಿದೆ.
ಸುಮಾರು ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ನ ನಿರ್ಧಾರ, ನಾಯಕತ್ವ ಬದಲಾವಣೆ ಹಾಗೂ ಮುಂದಿನ ರಾಜಕೀಯ ಬೆಳವಣಿಗೆಗಳ ಕುರಿತು ಸುದೀರ್ಘ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಭಾವುಕರಾದರು ಎಂದು ಮೂಲಗಳು ತಿಳಿಸಿವೆ.
ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ. ಬಿಜೆಪಿಯಿಂದ ಎಚ್ಚರಿಕೆ ವಹಿಸಿ. 2028ರ ವರೆಗೆ ಡಿ ಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು ಎನ್ನಲಾಗಿದೆ.
ಸಭೆಯಲ್ಲಿ ಹಾಜರಿದ್ದ ಕೆಲ ಸಚಿವರು ಹಾಗೂ ನಾಯಕರು ಕೂಡ ಗಂಭೀರವಾಗಿ ಕಾಣಿಸಿಕೊಂಡರು. ಸಭೆ ಮುಕ್ತಾಯ ವಾದ ಬಳಿಕ ಹೊರಬಂದ ಸಚಿವ ಸಂತೋಷ್ ಲಾಡ್ ಭಾವುಕರಾಗಿದ್ದರು. ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಕೇಳಲು ಮುಂದಾದಾಗ ಅವರು ಹೆಚ್ಚು ಮಾತನಾಡದೇ ಅಲ್ಲಿಂದ ತೆರಳಿದರು. ಅವರ ಕಣ್ಣಂಚು ಭಾರವಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಾಹ್ನ ಲೋಕಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.






