ಸರಕಾರಿ ಸ್ಥಳಗಳಲ್ಲಿ ಜಮಾವಣೆಗೆ ಅನುಮತಿ ಕಡ್ಡಾಯ ವಿಚಾರ: ಹೈಕೋರ್ಟ್ ತಡೆಯಾಜ್ಞೆ ವಿರುದ್ಧ ಮೇಲ್ಮನವಿಗೆ ಸಿಎಂ ಸೂಚನೆ

ಬೆಂಗಳೂರು : ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಜನರು ಸೇರಲು ಸಂಬಂಧಿಸಿದ ಇಲಾಖೆಗಳಿಂದ ಪೂರ್ವಾನುಮತಿ ಕಡ್ಡಾಯ ಎಂಬ ರಾಜ್ಯ ಸರಕಾರದ ಆದೇಶಕ್ಕೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರವಾಡ ಹೈಕೋರ್ಟ್ ಏಕ ಸದಸ್ಯ ಪೀಠ ತಡೆಯಾಜ್ಞೆ ನೀಡಿದೆ.ಆದರೆ, ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸುವಂತೆ ನಾನು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ನೋಂದಣಿಯಾದ ಅಥವಾ ನೋಂದಣಿ ಆಗದ ಯಾವುದೇ ಖಾಸಗಿ ಸಂಸ್ಥೆ ಅಥವಾ ಜನರು ಸರಕಾರದ ಆಸ್ತಿಯನ್ನು ಅಂದರೆ, ಜಮೀನು, ರಸ್ತೆ, ಪಾರ್ಕ್, ಆಟದ ಮೈದಾನಗಳು ಅಥವಾ ಕಟ್ಟಡಗಳಲ್ಲಿ ಸೇರಬೇಕಾದರೆ ಇಲ್ಲವೆ ಜಮಾವಣೆಗೊಳ್ಳಬೇಕು ಎಂದು ನಿರ್ಧರಿಸಿದರೆ, ಸ್ಥಳೀಯ ಪೊಲೀಸ್ ಆಯುಕ್ತ ಅಥವಾ ಉಪ ಪೊಲೀಸ್ ಆಯುಕ್ತರಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು. ಇಲ್ಲವಾದಲ್ಲಿ ಇದು ಭಾರತೀಯ ನ್ಯಾಯ ಸಂಹಿತೆ-2023ರ ಪ್ರಕಾರ ಕಾನೂನು ಬಾಹಿರ ಅಕ್ರಮ ಕೂಟ ಎಂದು ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಗೃಹ ಇಲಾಖೆಯ ಕಾರ್ಯದರ್ಶಿ ಇತ್ತೀಚಿಗೆ ಆದೇಶ ಹೊರಡಿಸಿದ್ದರು.







