ಜಾನಪದ ಸಾಹಿತ್ಯಕ್ಕೆ ಸಮಾಜ ಒಗ್ಗೂಡಿಸುವ ಶಕ್ತಿಯಿದೆ : ಡಾ.ಸಿ.ಎನ್.ಮಂಜುನಾಥ್

ಬೆಂಗಳೂರು : ಜಾನಪದ ಸಾಹಿತ್ಯದಲ್ಲಿ ಸಮಾಜವನ್ನು ಒಗ್ಗೂಡಿಸುವಂತಹ ಮಹತ್ತಾದ ಶಕ್ತಿಯಿದೆ. ಸಹಬಾಳ್ವೆ, ನಾವೆಲ್ಲ ಒಟ್ಟಿಗೆ ಇರಬೇಕೆಂಬ ಆಶಯವಿರುವ ಜಾನಪದ ಸಾಹಿತ್ಯವನ್ನು ಇವತ್ತಿನ ತಲೆಮಾರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಲೋಕಸಭಾ ಸದಸ್ಯ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.
ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ನಡೆದ 2025ರ ಸಾಲಿನ ನಾಡೋಜ ಎಚ್.ಎಲ್.ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದು ಸಹಬಾಳ್ವೆ ಎಂಬುದನ್ನು ಕೇವಲ ಪುಸ್ತಕಗಳಲ್ಲಷ್ಟೇ ನೋಡುತ್ತಿದ್ದೇವೆ. ವಿದ್ಯಾವಂತರಿಂದಲೇ ಸಮಾಜ ಒಡೆದು ಹೋಗುತ್ತಿದೆ. ದೇಶದಲ್ಲಿ ಭಯೋತ್ಪಾದಕ ವಾತಾವರಣ ಹೆಚ್ಚಾಗುತ್ತಿದೆ. ನಾವು ಗಳಿಸಿದ ಪದವಿಗಳು ಮುಖ್ಯವಲ್ಲ, ನಮ್ಮ ಓದು ಎಷ್ಟು ಮನೆಗಳಲ್ಲಿ ನಗು ತರಿಸಿದೆ ಎಂಬುದು ಮುಖ್ಯವಾಗುತ್ತದೆ ಎಂದು ಸಿ.ಎನ್.ಮಂಜುನಾಥ್ ಹೇಳಿದರು.
ಜಾನಪದ ಸಾಹಿತ್ಯ, ಜಾನಪದ ಸಂಗೀತ, ಜಾನಪದ ಒಗಟುಗಳ ಹಿನ್ನೆಲೆಯಲ್ಲಿ ಧಾರಾವಾಹಿಗಳು ಬರಬೇಕು. ಆದರೆ, ಇಂದು ಮನೆಯನ್ನು ಹೊಡೆಯುವಂತಹ, ಹೆಣ್ಣುಮಕ್ಕಳನ್ನು ವಿಲನ್‍ಗಳ ರೀತಿಯಲ್ಲಿ ತೋರಿಸುವಂಥ ಧಾರವಾಹಿಗಳೇ ಹೆಚ್ಚಾಗಿ ಪ್ರಸಾರವಾಗುತ್ತಿವೆ. ನಮ್ಮ ನೆಲಮೂಲ ಕಲೆ, ಸಾಹಿತ್ಯ, ಸಂಗೀತವನ್ನೊಳಗೊಂಡ ಧಾರವಾಹಿಗಳು, ಸಿನಿಮಾಗಳು ಹೆಚ್ಚಾಗಬೇಕು ಎಂದು ಸಿ.ಎನ್.ಮಂಜುನಾಥ್ ತಿಳಿಸಿದರು.
ಎಚ್.ಎಲ್.ನಾಗೇಗೌಡ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಜಾನಪದ ಲೋಕಕ್ಕೆ ಕೊಟ್ಟಿರುವ ಅವರ ಕೊಡುಗೆಗಳ ಮೂಲಕ ನಮ್ಮೊಳಗೆ ಸದಾ ಜೀವಂತವಾಗಿರುತ್ತಾರೆ. ಜಾನಪದ ಲೋಕ ಅಂದರೆ ಅದು ನಾಗೇಗೌಡರ ಸಂಪತ್ತು. ಇಂಥ ಜಾನಪದ ಲೋಕಕ್ಕೆ ಯುನೆಸ್ಕೋದಿಂದ ಮಾನ್ಯತೆ ದೊರಕಿರುವುದು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ವಿಚಾರ ಎಂದು ಸಿ.ಎನ್.ಮಂಜುನಾಥ್ ಹೇಳಿದರು.
ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ನಿಸರ್ಗ ನಿಷ್ಠ ನೆಲೆಯೊಳಗೆ ಬದುಕನ್ನು ಕಟ್ಟಿಕೊಳ್ಳುವ, ಲೋಕಜ್ಞಾನವನ್ನು ಕಾಣುವ ಪ್ರಜ್ಞೆ ನಮ್ಮ ಜಾನಪದದ್ದಾಗಿದೆ. ಅದು ಮಾತೃ ಪ್ರಧಾನದ ನೆಲೆಯೊಳಗೆ ಮೂಡಿರುವಂಥದ್ದು. ಅಂತಹ ಜಾನಪದ ಪ್ರಜ್ಞೆಯನ್ನು ನಡೆ-ನುಡಿಯಾಗಿಸಿಕೊಂಡು ಬಾಳಿದವರು ಎಚ್.ಎಲ್.ನಾಗೇಗೌಡರು ಎಂದರು.
ಜಾನಪದಕ್ಕೆ ಎಂದಿಗೂ ಅಳಿವಿಲ್ಲ. ಅದು ಪರಿವರ್ತನಾಶೀಲವಾದದ್ದು, ಜಂಗಮಶೀಲವಾದದ್ದು. ಆದ್ದರಿಂದಲೇ ಜಾನಪದ ಪರಂಪರೆಯನ್ನು ಮುಂದುವರೆಸುವುದಕ್ಕೆ ಬೇಕಾಗುವ ರೀತಿಯಲ್ಲಿ ನಾಗೇಗೌಡರು ಜಾನಪದ ಲೋಕ ಮತ್ತು ಜಾನಪದ ಪರಿಷತ್ತನ್ನು ಕಟ್ಟಿದ್ದಾರೆ ಎಂದು ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.
ಕಾರ್ಯಕ್ರಮದಲ್ಲಿ ನಾಡೋಜ ಎಚ್.ಎಲ್.ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಟಿ.ಲಕ್ಷ್ಮೀಪತಿ, ಕರ್ನಾಟಕ ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
‘ಜಾನಪದ ಲೋಕ ಕಟ್ಟಿದ ಎಚ್.ಎನ್.ನಾಗೇಗೌಡರ ಹೆಸರಿನಲ್ಲಿ ಪ್ರತಿವರ್ಷ ಒಬ್ಬ ಹಿರಿಯ ಕಲಾವಿದರಿಗೆ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈಗಾಗಲೇ ಉತ್ತರಪ್ರದೇಶ, ಮಧ್ಯಪ್ರದೇಶ, ಆಂದ್ರಪ್ರದೇಶ, ಕೇರಳ ಭಾಗಗಳ ಕಲಾವಿದರಿಗೆ ಪ್ರಶಸ್ತಿಗಳನ್ನು ನೀಡಿದ್ದು, ಕರ್ನಾಟಕ ನಾಲ್ಕು ಜನ ಕಲಾವಿದರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ವರ್ಷ ತಮಿಳುನಾಡಿನ ತೆರುಕೂತು ಜನಪದ ರಂಗಭೂಮಿಯ ಹಿರಿಯ ಕಲಾವಿದ ಟಿ.ಲಕ್ಷ್ಮೀಪತಿ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ’
-ಪ್ರೊ.ಹಿ.ಚಿ.ಬೋರಲಿಂಗಯ್ಯ, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ.







