ನ.5ರ ‘ಇಂಡಿಯಾ ಒಕ್ಕೂಟ’ದ ಧರಣಿಗೆ ಜನಪರ ಸಂಘಟನೆಗಳ ಒಕ್ಕೂಟ ಬೆಂಬಲ

ಸಾಂದರ್ಭಿಕ ಚಿತ್ರ
ಬೆಂಗಳೂರು, ನ.2: ಜ್ಞಾನೇಶ್ ಕುಮಾರ್ ರಾಜೀನಾಮೆ ಹಾಗೂ ಎಸ್ಐಆರ್ ರದ್ದತಿಗಾಗಿ ಆಗ್ರಹಿಸಿ, ಇಂಡಿಯಾ ಒಕ್ಕೂಟದಿಂದ ನ.5ರಂದು ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಧರಣಿಯನ್ನು ಬೆಂಬಲಿಸುವುದಾಗಿ ಎಸ್ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು, ಜನಪರ ಸಂಘಟನೆಗಳ ಒಕ್ಕೂಟ ತಿಳಿಸಿದೆ.
ಬಿಡುಗಡೆಯಾದ ಎಸ್ಐಆರ್ ಅಂತಿಮ ಪಟ್ಟಿಯಲ್ಲಿ 2025ರ ಮತದಾರರ ಪಟ್ಟಿಗೆ ಸುಮಾರು 6.5 ಲಕ್ಷ ಜನ ಸೇರ್ಪಡೆಯಾದರೆ 1 ಕೋಟಿ 6 ಲಕ್ಷ ಜನ ಡಿಲೀಟ್ ಮಾಡಿದ್ದಾರೆ. ಮೃತಪಟ್ಟವರ ಹಾಗೂ ಎರಡು ಓಟರ್ ಐಡಿ ಇರುವವರ ಸಂಖ್ಯೆ ಸುಮಾರು 25 ಲಕ್ಷ ಎಂದು ಚುನಾವಣಾ ಆಯೋಗವೇ ಹೇಳುತ್ತದೆ. ಹಾಗಿದ್ದಾಗ ಮಿಕ್ಕ 75 ಲಕ್ಷ ಮತದಾರರು ಎಲ್ಲಿಗೆ ಹೋದರು ಎಂಬುದಕ್ಕೆ ಚುನಾವಣಾ ಆಯೋಗದ ಬಳಿ ಉತ್ತರವೇ ಇಲ್ಲ ಎಂದು ತಿಳಿಸಿದೆ.
ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಶೇ.43ರಷ್ಟು ಮತದಾರರು ಕಾಣೆಯಾಗಲು ಹೇಗೆ ಸಾಧ್ಯ? ಎಲ್ಲದಕ್ಕಿಂತ ಹೆಚ್ಚಾಗಿ ನಾಗರೀಕ ಮತಕಾವಲು ಸಮಿತಿ ರಾಜ್ಯದ ಅನೇಕ ಕಡೆ ನಡೆಸಿದ ಬೂತ್ ಪರಿಶೋಧನೆಯಲ್ಲಿ ನೂರಾರು ಜನ ಸ್ಥಳದಲ್ಲೇ ವಾಸವಾಗಿದ್ದರೂ ಶಿಫ್ಟೆಡ್ ಎಂದು ಡಿಲೀಟ್ ಆಗಿರುವುದು. ಬದುಕಿದ್ದರೂ ಸತ್ತಿರುವುದಾಗ ವರದಿಯಾಗಿರುವುದು ಬೆಳಕಿಗೆ ಬಂದಿದೆ. ಅದನ್ನು ಚುನಾವಣಾ ಆಯೋಗದ ಗಮನಕ್ಕೆ ತಂದಾಗಲೂ ಅವರು ಸೇರ್ಪಡೆಯಾಗದೆ ಹಾಗೇ ಉಳಿದುಕೊಂಡಿದ್ದಾರೆ ಎಂದು ಒಕ್ಕೂಟ ತಿಳಿಸಿದೆ.
ಲಕ್ಷಾಂತರ ಮತದಾರರನ್ನು ಬೇಕಾಬಿಟ್ಟಿಯಾಗಿ ಡಿಲೀಟ್ ಮಾಡಿರುವ ಎಸ್ಐಆರ್ ಪಟ್ಟಿಯನ್ನು ಕರ್ನಾಟಕ ಒಪ್ಪುವುದಿಲ್ಲ. ಅದನ್ನು ಕರ್ನಾಟಕದ ಸಮಸ್ತ ಜನಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳು ತಿರಸ್ಕರಿಸುತ್ತಿವೆ. ದೇಶಾದ್ಯಂತ ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಮತಗಳ ಮಾರಣ ಹೋಮವನ್ನು ವಿರೋಧಿಸಿ ವಿಪಕ್ಷಗಳು ಕೂಡ ಹೋರಾಟ ನಡೆಸುತ್ತಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೋರಾಟದ ನೇತೃತ್ವ ವಹಿಸಿಕೊಂಡಿದ್ದಾರೆ. ಆದರೆ ಅವರದೇ ಪಕ್ಷದ ಕೆಲ ಸಚಿವರು ಎಸ್ಐಆರ್ ಪ್ರಕ್ರಿಯೆಯನ್ನು ಸಮರ್ಥಿಸುವ ರೀತಿಯಲ್ಲಿ ಮಾತನಾಡುತ್ತಿರುವುದು ಅತ್ಯಂತ ಶೋಚನೀಯ ಎಂದು ತಿಳಿಸಿದೆ.






