ರೇಣುಕಾಸ್ವಾಮಿ ಕೊಲೆ | ಪೊಲೀಸರು ಎಚ್ಚರ ತಪ್ಪಿದ್ದರೆ ಪ್ರಕರಣ ಬೇರೆ ದಾರಿ ಹಿಡಿಯುತ್ತಿತ್ತು : ಪೊಲೀಸ್ ಆಯುಕ್ತ ಬಿ.ದಯಾನಂದ್
ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಸ್ವಲ್ಪ ಎಚ್ಚರ ತಪ್ಪಿದ್ದರೂ ಪ್ರಕರಣ ಬೇರೆ ದಾರಿ ಹಿಡಿಯುತ್ತಿತ್ತು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೊಲೀಸರ ನಿಷ್ಪಕ್ಷಪಾತ ಸಮಯಪ್ರಜ್ಞೆಯಿಂದ ಈ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಸ್ವಲ್ಪ ನಿರ್ಲಕ್ಷ್ಯವಹಿಸಿದ್ದರೂ ಸಹ ಪ್ರಕರಣ ಕ್ಲಿಷ್ಟಕರ ವಾಗುವ ಸಂಭವವಿತ್ತು. ಪೊಲೀಸ್ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುವ ಮೂಲಕ ತ್ವರಿತವಾಗಿ ಅವಶ್ಯಕ ಸಾಕ್ಷ್ಯಗಳನ್ನು ಕಲೆಹಾಕಿದ್ದು, ಇದೊಂದು ಅತ್ಯಂತ ಹೀನ ಮತ್ತು ಹೇಯ ಕೃತ್ಯವಾಗಿದ್ದು, ಗಂಭೀರ ಪ್ರಕರಣವಾಗಿದೆ ಎಂದರು.
ಈ ಪ್ರಕರಣವನ್ನು ಬೇರೆ ಬೇರೆ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ. ತನಿಖಾ ಹಂತದಲ್ಲಿ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಆದರೆ, ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಮೂಲಕ ಮೃತನ ಕುಟುಂಬಸ್ಥರಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡಲಿದ್ದೇವೆ ಎಂದು ಅವರು ಹೇಳಿದರು.
ಇದು ಗಂಭೀರ ಪ್ರಕರಣವಾಗಿರುವುದರಿಂದ ಎಲ್ಲ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸುತ್ತೇವೆ. ಈ ಪ್ರಕರಣದ ಗಂಭೀರತೆ ಅರಿತು ವಿಜಯನಗರ ಉಪವಿಭಾಗದ ಎಸಿಪಿ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. ಆ ವಿಭಾಗದ ಎಲ್ಲಾ ಇನ್ಸ್ಪೆಕ್ಟರ್ ಗಳು ಹಾಗೂ ಸಿಬ್ಬಂದಿ ತನಿಖಾ ತಂಡದಲ್ಲಿದ್ದಾರೆ ಎಂದು ಬಿ.ದಯಾನಂದ್ ತಿಳಿಸಿದರು.
ಅನ್ನಪೂರ್ಣೇಶ್ವರಿ ಠಾಣೆಯ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಹಾಗೂ ಠಾಣೆಯ ಬಳಿ ಶಾಮಿಯಾನ ಹಾಕಿರುವುದರ ಕುರಿತು ಪ್ರತಿಕ್ರಿಯಿಸಿದ ಬಿ.ದಯಾನಂದ್, ಪ್ರತಿಯೊಂದಕ್ಕೂ ಒಂದು ಕಾರಣವಿರುತ್ತದೆ. ಆರೋಪಿಗಳಲ್ಲಿ ಸೆಲೆಬ್ರಿಟಿಗಳಿರುವುದರಿಂದ ಹೆಚ್ಚಿನ ಕುತೂಹಲ ಕಂಡು ಬರುತ್ತಿರುವುದರಿಂದ ತನಿಖೆಯ ಭಾಗವಲ್ಲದ ಅನೇಕ ಉತ್ಪ್ರೇಕ್ಷೆ, ಊಹಾಪೋಹಗಳು ಕಂಡು ಬರುತ್ತಿವೆ. ತಾಳ್ಮೆಯಿಂದ ಸಹಕರಿಸಿದರೆ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿದೆ ಎಂದು ಹೇಳಿದರು.
ಪ್ರಕರಣದಲ್ಲಿ ಇದುವರೆಗೂ 17 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಕೆಲವು ಆರೋಪಿಗಳನ್ನು ಮೈಸೂರಿನಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಆದ್ದರಿಂದ ಚಿತ್ರದುರ್ಗ, ಮೈಸೂರು, ಬೆಂಗಳೂರು ನಗರ ಹಾಗೂ ಇನ್ನಿತರ ಕಡೆ ತನಿಖೆ ಮತ್ತು ಸ್ಥಳ ಮಹಜರು ಮಾಡಬೇಕಾಗಿದೆ. ಆದ್ದರಿಂದ ಹಲವು ಆಯಾಮಗಳಲ್ಲಿ ಒಬ್ಬೊಬ್ಬ ಇನ್ಸ್ಪೆಕ್ಟರ್ ಒಂದೊಂದು ಕಡೆ ಹೋಗಿ ತನಿಖೆ ನಡೆಸಿ ಸಾಕ್ಷ್ಯಾಧಾರಗಳನ್ನು ಕಲೆಹಾಕುತ್ತಿದ್ದಾರೆ ಎಂದು ಬಿ.ದಯಾನಂದ್ ತಿಳಿಸಿದರು.