ವೈದ್ಯಕೀಯ ಸೇವೆಯಲ್ಲಿ ಬದ್ಧತೆ ಹಾಗೂ ನೈತಿಕತೆ ಇಂದಿನ ಅಗತ್ಯ: ಸುಧಾಮೂರ್ತಿ

ಬೆಂಗಳೂರು: ಸ್ಪರ್ಧಾತ್ಮಕ ಜಗತ್ತಿನಲ್ಲಿ ಖಾಸಗಿ ಆಸ್ಪತ್ರೆಯೊಂದು ಬದ್ಧತೆ ಹಾಗೂ ನೈತಿಕತೆ ಇಟ್ಟುಕೊಂಡು ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಪ್ರಶಂಸನೀಯ ಎಂದು ಸುಧಾಮೂರ್ತಿ ಹೇಳಿದರು.
ನಗರದ ನಿಮ್ಹಾನ್ಸ್ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಎನ್‌ಯು ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡ ಇನ್ಫೋಸಿಸ್ ಫೌಂಡೇಶನ್‌ನ ಮಾಜಿ ಅಧ್ಯಕ್ಷೆ ಹಾಗೂ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಮಾತನಾಡಿ, ಆಸ್ಪತ್ರೆ ನಡೆಸುವುದು ಸುಲಭದ ಕೆಲಸವಲ್ಲ. ಇಂಥಹ ಸ್ಪರ್ಧಾತ್ಮಕ ವ್ಯವಸ್ಥೆಯಲ್ಲಿ ಆಸ್ಪತ್ರೆ 25 ವರ್ಷಗಳನ್ನ ಪೂರ್ಣಗೊಳಿಸುವುದು ಸಾಹಸವೇ ಸರಿ. ಆ ನಿಟ್ಟಿನಲ್ಲಿ ಎನ್‌ಯು ಆಸ್ಪತ್ರೆಯ ಈ ಪಯಣ ನಿಜಕ್ಕೂ ಅಭಿನಂದನಾರ್ಹ. ಇಂದು ಸಂಪೂರ್ಣ ಉಚಿತ ಚಿಕಿತ್ಸೆ ನೀಡುವ ಆಸ್ಪತ್ರೆ ನಡೆಸುವುದು ಅಸಾಧ್ಯದ ಮಾತು. ಹಾಗೆಯೇ ಕೇವಲ ಹಣ ಮಾಡುವುದಕ್ಕಷ್ಟೇ ಆಸ್ಪತ್ರೆ ನಡೆಸುವುದು ಸರಿಯಾದುದಲ್ಲ. ಆದರೆ ಬದ್ಧತೆ ಹಾಗೂ ನೈತಿಕತೆ ಇಟ್ಟುಕೊಂಡು ಸೇವೆ ನೀಡುವ ಕೆಲಸ ನಿಜಕ್ಕೂ ಸ್ವಾಗತಾರ್ಹ ಎಂದು ತಿಳಿಸಿದರು.
ರಜತ ಮಹೋತ್ಸವದ ಕುರಿತು ಎನ್‌ಯು ಆಸ್ಪತ್ರೆಯ ಅಧ್ಯಕ್ಷ ಡಾ. ವೆಂಕಟೇಶ್ ಕೃಷ್ಣಮೂರ್ತಿ ಮಾತನಾಡಿ, ನಮ್ಮ ವೈದ್ಯಕೀಯ ಸಿಬ್ಬಂದಿ ಹಾಗೂ ವೈದ್ಯರು ನಿಯಮಿತವಾಗಿ ಪ್ರತಿಷ್ಠಿತ ವೈದ್ಯಕೀಯ ನಿಯತಕಾಲಿಕಗಳಲ್ಲಿ ಸಂಶೋಧನೆಗಳನ್ನು ಪ್ರಕಟಿಸುತ್ತಾ ಬಂದಿದ್ದಾರೆ. ಹಾಗೆಯೇ ಈ ಮೂಲಕ ರೋಗಿಗಳಲ್ಲಿನ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿವೆ. ರೋಗಿಯು ಶೀಘ್ರ ಗುಣಮುಖಗೊಳ್ಳುತ್ತಿದ್ದಾರೆ. ಮತ್ತೆ ರೋಗಕ್ಕೆ ತುತ್ತಾಗುವುದು ಹಾಗೂ ಮರಣ ಪ್ರಮಾಣವು ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಖ್ಯಾತ ಯುರಾಲಜಿಸ್ಟ್ ಮತ್ತು ಎನ್‌ಯು ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಪ್ರಸನ್ನ ವೆಂಕಟೇಶ್ ಉಪಸ್ಥಿತರಿದ್ದರು.
25ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಆಸ್ಪತ್ರೆಗೆ ದೀರ್ಘ ಹಾಗೂ ವಿಶೇಷ ಸೇವೆ ಸಲ್ಲಿಸಿದ ಸಿಬ್ಬಂದಿಗಳನ್ನ ಗೌರವಿಸಲಾಯಿತು.







