‘ಟಾಕ್ಸಿಕ್’ ಚಿತ್ರದ ಟೀಸರ್ ವಿರುದ್ಧ ದೂರು: ಸಿಬಿಎಫ್ಸಿ ಮುಖ್ಯಸ್ಥರಿಗೆ ರಾಜ್ಯ ಮಹಿಳಾ ಆಯೋಗ ಪತ್ರ

PC: x.com/tumharacandy
ಬೆಂಗಳೂರು, ಜ.13: ‘ಟಾಕ್ಸಿಕ್’ ಚಲನಚಿತ್ರದ ಟೀಸರ್ ಕುರಿತು ಆಮ್ ಆದ್ಮಿ ಪಾರ್ಟಿ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್ ಅವರು ದೂರು ಸಲ್ಲಿಸಿರುವ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಕೇಂದ್ರಿಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್ಸಿ)ಯ ಮುಖ್ಯಸ್ಥರಿಗೆ ಪತ್ರ ಬರೆದಿದೆ.
‘ಟಾಕ್ಸಿಕ್’ ಚಿತ್ರದ ಟೀಸರ್ನಲ್ಲಿ ಅಶ್ಲೀಲ ಹಾಗೂ ಪ್ರೌಢ ದೃಶ್ಯಗಳು ಸೇರಿದ್ದು, ಅವು ಮಹಿಳೆಯರು ಮತ್ತು ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಗಂಭೀರ ಧಕ್ಕೆಯನ್ನುಂಟುಮಾಡುತ್ತಿವೆ ಎಂದು ಆರೋಪಿಸಿ ಉಷಾ ಮೋಹನ್ ಅವರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಜನವರಿ 12ರಂದು ರಾಜ್ಯ ಮಹಿಳಾ ಆಯೋಗದಲ್ಲಿ ಸ್ವೀಕೃತಗೊಂಡ ಅರ್ಜಿಯಲ್ಲಿ, ಯಾವುದೇ ವಯೋಮಿತಿ ಅಥವಾ ಮುನ್ನೆಚ್ಚರಿಕೆ ಸೂಚನೆಗಳಿಲ್ಲದೆ ಟೀಸರ್ ಅನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗಿದೆ. ಇಂತಹ ದೃಶ್ಯಗಳು ಮಹಿಳೆಯರ ಘನತೆಗೆ ಧಕ್ಕೆ ತರುವುದರ ಜೊತೆಗೆ ಕನ್ನಡದ ಸಾಂಸ್ಕೃತಿಕ ವಾತಾವರಣಕ್ಕೆ ಅವಮಾನವಾಗಿವೆ ಎಂದು ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ‘ಟಾಕ್ಸಿಕ್’ ಚಿತ್ರದ ಟೀಸರ್ನ್ನು ರದ್ದುಗೊಳಿಸಿ, ಸಾಮಾಜಿಕ ಜಾಲತಾಣಗಳಿಂದ ತೆರವುಗೊಳಿಸುವಂತೆ ಹಾಗೂ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಅರ್ಜಿಯಲ್ಲಿ ಉಲ್ಲೇಖಿಸಿದ ಅಂಶಗಳನ್ನು ನಿಯಮಾನುಸಾರ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.







