ರಸ್ತೆ ಅಗಲೀಕರಣಕ್ಕೆ ಟಿ.ಡಿ.ಆರ್ ವ್ಯವಸ್ಥೆಯ ಸಂಪೂರ್ಣ ಡಿಜಿಟಲೀಕರಣ : ಸಚಿವ ಕೃಷ್ಣ ಬೈರೇಗೌಡ
"ರಾಜಧಾನಿಯ ಸಂಚಾರ ದಟ್ಟಣೆ ನಿವಾರಣೆಗೆ ಮಹತ್ವದ ಹೆಜ್ಜೆ"

ಕೃಷ್ಣ ಬೈರೇಗೌಡ
ಬೆಂಗಳೂರು : ರಸ್ತೆಗಳ ಅಗಲೀಕರಣ ಮತ್ತು ಹೊಸ ರಸ್ತೆಗಳ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಸುಲಭಗೊಳಿಸಲು ಟಿ.ಡಿ.ಆರ್ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸುವಂತೆ ಸಚಿವ ಕೃಷ್ಣ ಬೈರೇಗೌಡ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ವಿಕಾಸಸೌಧದಲ್ಲಿ ಸಂಬಂಧಿತ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ದೀರ್ಘಕಾಲೀನ ಹಾಗೂ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಸ್ತೆಗಳ ಅಗಲೀಕರಣ ಮತ್ತು ಹೊಸ ರಸ್ತೆಗಳ ನಿರ್ಮಾಣವು ಅತ್ಯಂತ ತುರ್ತು ಮತ್ತು ಅನಿವಾರ್ಯ ಹೆಜ್ಜೆಯಾಗಿದೆ ಎಂದರು.
ಆದರೆ, ಇಷ್ಟು ವರ್ಷಗಳ ಕಾಲ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಸುಲಭಗೊಳಿಸುವ ಟಿ.ಡಿ.ಆರ್ ವ್ಯವಸ್ಥೆಯು ಸಂಪೂರ್ಣವಾಗಿ ಕಾಗದದ ಕಡತಗಳ ಮೂಲಕ ನಡೆಯುತ್ತಿದ್ದುದರಿಂದ, ಸರಿಯಾದ ಟ್ರ್ಯಾಕಿಂಗ್ ವ್ಯವಸ್ಥೆ ಇಲ್ಲದೆ ವ್ಯವಸ್ಥೆಯಲ್ಲಿ ಪಾರದರ್ಶಕತೆಯ ಕೊರತೆಯಿತ್ತು. ಪರಿಣಾಮ ಸಾರ್ವಜನಿಕರಿಗೆ ಟಿ.ಡಿ.ಆರ್ ವ್ಯವಸ್ಥೆಯ ಮೇಲೆ ತೀರಾ ಅಪನಂಬಿಕೆ ಹಾಗೂ ಅತೃಪ್ತಿ ಮೂಡಿತ್ತು ಎಂದು ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.
ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಎದುರಾಗಿರುವ ಅಡೆತಡೆಗಳನ್ನು ನಿವಾರಿಸಲು ಹಾಗೂ ಭೂಮಾಲಕರು ಹಾಗೂ ಸಾರ್ವಜನಿಕರಲ್ಲಿ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸಲು ಪ್ರಸ್ತುತ ಮಹತ್ವದ ಹೆಜ್ಜೆ ಇಡಬೇಕಾಗಿದೆ. ಅದರಂತೆ, ರಸ್ತೆ ಮತ್ತು ಆಸ್ತಿಯ ವಿವರಗಳ ಪ್ರಾಥಮಿಕ ಹಂತದಿಂದ ಹಿಡಿದು, ಎಲ್ಲಾ ಹಂತಗಳ ಪರಿಶೀಲನೆ ಮುಗಿದು ಅಂತಿಮವಾಗಿ ಟಿ.ಡಿ.ಆರ್ ಪ್ರಮಾಣಪತ್ರ ವಿತರಿಸುವವರೆಗಿನ ಸಂಪೂರ್ಣ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಲು ಅಗತ್ಯವಾದ ಕ್ರಮ ಜರುಗಿಸಬೇಕು ಎಂದು ಸಂಬಂಧಿತ ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ಸೂಚಿಸಿದರು.
ಕೇವಲ ಟಿ.ಡಿ.ಆರ್ ಮಂಜೂರಾತಿ ಮಾತ್ರವಲ್ಲದೆ, ಅದರ ವಹಿವಾಟು (ಖರೀದಿ-ಮಾರಾಟ) ಮತ್ತು ಅಂತಿಮ ಬಳಕೆಯ ಪ್ರಕ್ರಿಯೆಯನ್ನೂ ಸಂಪೂರ್ಣವಾಗಿ ಆನ್ಲೈನ್ ಡಿಜಿಟಲ್ ವೇದಿಕೆಗೆ ತರಬೇಕು. ಈ ಹೈಟೆಕ್ ವ್ಯವಸ್ಥೆಯಿಂದಾಗಿ ಇನ್ನು ಮುಂದೆ ನಾಗರಿಕರು ತಮ್ಮ ಕಡತಗಳು ಯಾವ ಹಂತದಲ್ಲಿವೆ ಎಂಬುದನ್ನು ಆನ್ಲೈನ್ ಮೂಲಕವೇ ಸುಲಭವಾಗಿ ಟ್ರ್ಯಾಕ್ ಮಾಡಲು ಸಾಧ್ಯವಾಗಲಿದೆ. ಜೊತೆಗೆ ಮಧ್ಯವರ್ತಿಗಳ ಹಸ್ತಕ್ಷೇಪ, ಅನಗತ್ಯ ವಿಳಂಬ ಮತ್ತು ಸಾರ್ವಜನಿಕರಿಗೆ ಆಗುವ ಕಿರುಕುಳಕ್ಕೆ ಸಂಪೂರ್ಣವಾಗಿ ಮುಕ್ತಿ ಸಿಗಲಿದೆ ಎಂದು ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.
ಈ ಹೊಸ ಸುಧಾರಣೆಯು ಸಾರ್ವಜನಿಕರಲ್ಲಿ ಟಿ.ಡಿ.ಆರ್ ವ್ಯವಸ್ಥೆಯ ಮೇಲೆ ಕಳೆದುಹೋಗಿದ್ದ ವಿಶ್ವಾಸವನ್ನು ಮರಳಿ ತರಲಿದೆ ಮಾತ್ರವಲ್ಲದೆ, ಈ ವ್ಯವಸ್ಥೆಯನ್ನು ಅತ್ಯಂತ ಕಾರ್ಯಸಾಧ್ಯ ಹಾಗೂ ಜನಸ್ನೇಹಿಯಾಗಿಸಲಿದೆ. ಅತ್ಯಂತ ಪಾರದರ್ಶಕ ಮತ್ತು ತ್ವರಿತವಾಗಿರುವ ಈ ಆನ್ಲೈನ್ ವ್ಯವಸ್ಥೆಯ ಮೂಲಕ ಸರಾಗವಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ನಗರದಲ್ಲಿ ಸುಗಮ ಸಂಚಾರಕ್ಕೆ ಬೇಕಾದ ಬೃಹತ್ ಮೂಲಸೌಕರ್ಯಗಳ ಸೃಷ್ಟಿಯನ್ನು ಕೈಗೊಳ್ಳಲು ಇದು ದಾರಿ ಮಾಡಿಕೊಡಲಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಸಭೆಯಲ್ಲಿ ನಗರ ಪಾಲಿಕೆಗಳ ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್., ಜಿ.ಜಗದೀಶ್, ಬೆಂಗಳೂರು ನಗರ ಸಿಇಒ ಆರ್.ಯತೀಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.






