ಬೆಂಗಳೂರು ಅಭಿವೃದ್ಧಿಗೆ 10-15 ವರ್ಷಗಳ ಸಮಗ್ರ ಯೋಜನೆ : ಸಿಎಂ ಡಿ.ಕೆ.ಶಿವಕುಮಾರ್
"ಸುಗಮ ಸಂಚಾರ ವ್ಯವಸ್ಥೆ, ವಸತಿ, ನೀರು, ಕೈಗಾರಿಕಾ ಅಭಿವೃದ್ಧಿಗೆ ರೂಪುರೇಷೆ"

ಬೆಂಗಳೂರು : ಬೆಂಗಳೂರು ನಗರದ ಅಭಿವೃದ್ಧಿಗೆ ಮುಂದಿನ 10-15 ವರ್ಷಗಳ ಸಮಗ್ರ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ನಡೆದ ಬೆಂಗಳೂರು ಮಹಾನಗರ ಪ್ರದೇಶದ ಆರ್ಥಿಕ ಅಭಿವೃದ್ಧಿ ಕುರಿತ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, 2047ರ ವೇಳೆಗೆ ರಾಜ್ಯದ ಆರ್ಥಿಕತೆಯನ್ನು 1 ಟ್ರಿಲಿಯನ್ ಡಾಲರ್‌ಗೆ ತಲುಪಿಸುವ ಗುರಿ ಹೊಂದಲಾಗಿದೆ. 2037ರ ವೇಳೆಗೆ ರಾಜ್ಯದ ಆರ್ಥಿಕತೆ 400-420 ಬಿಲಿಯನ್ ಡಾಲರ್ ತಲುಪುವ ಯೋಜನೆ ರೂಪಿಸಲಾಗಿದೆ. ಇದಕ್ಕೆ ಪೂರಕವಾಗಿ ಬೆಂಗಳೂರು ಮಹಾನಗರ ಪ್ರದೇಶದಲ್ಲಿ ಸುಗಮ ಸಂಚಾರ ವ್ಯವಸ್ಥೆ, ವಸತಿ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಬಿಎಂಆರ್ ವ್ಯಾಪ್ತಿಯಲ್ಲಿ 9 ಹೊಸ ಇಂಟಿಗ್ರೇಟೆಡ್ ಕೈಗಾರಿಕಾ ಟೌನ್‌ಶಿಪ್‌ಗಳನ್ನು ರೂಪಿಸಬೇಕಾಗಿದೆ ಎಂದು ವಿವರಿಸಿದರು.
ಈಗಾಗಲೇ 7,900 ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, 5,600 ಎಕರೆ ಜಾಗದ ಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸರ್ಕಾರ ಈಗಾಗಲೇ ಎಐ ಸಿಟಿ ನಿರ್ಮಿಸುವುದಾಗಿ ಘೋಷಿಸಿದ್ದು, ಸಿಂಗಾಪುರದ ಪುಂಗ್ಗೋಲ್ ಮಾದರಿಯಲ್ಲಿ ಎಐ ಸಿಟಿ ನಿರ್ಮಿಸಬೇಕಾಗಿದೆ. ಎಐ ವಿಶ್ವವಿದ್ಯಾಲಯ ಸ್ಥಾಪಿಸಲು ಜಾಗದ ಅಗತ್ಯವಿದ್ದು, ಲಭ್ಯವಿರುವ ಸ್ಥಳಗಳನ್ನು ಗುರುತಿಸುವ ಕಾರ್ಯ ನಡೆಸಬೇಕು ಎಂದು ಸೂಚಿಸಿದರು.
ಸಂಪೂರ್ಣ ಬೆಂಗಳೂರು ನಗರ ಜಿಲ್ಲೆಗೆ ಮಾಸ್ಟರ್ ಪ್ಲಾನ್ :
ಹಿಂದಿನ ಸಭೆಯಲ್ಲಿ ತೀರ್ಮಾನಿಸಿದಂತೆ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣ ಬೆಂಗಳೂರು ನಗರ ಜಿಲ್ಲೆಯ ಪ್ರದೇಶವನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ವ್ಯಾಪ್ತಿಗೆ ಸೇರ್ಪಡೆಗೊಳಿಸಿ, ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ವಿವರಿಸಿದರು.
ಇದರಿಂದ ಜಿಲ್ಲೆಯಾದ್ಯಂತ ನೀರು ವಿತರಣಾ ಸಾಮರ್ಥ್ಯ ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಲು ಸಾಧ್ಯವಾಗಲಿದೆ. ಇದರೊಂದಿಗೆ ಜಿಲ್ಲೆಯ ಸಂಪೂರ್ಣ ರಸ್ತೆ ಜಾಲವನ್ನು ಗುರುತಿಸಿ, ಅಭಿವೃದ್ಧಿಗೆ ಯೋಜನೆ ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದಕ್ಕೆ ಪೂರಕವಾಗಿ ಬೆಂಗಳೂರು ನಗರ ಜಿಲ್ಲೆಯ ಎಲ್ಲ ಪ್ರದೇಶಗಳನ್ನು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸುಗಮ ಸಂಚಾರ ವ್ಯವಸ್ಥೆ :
ಬೆಂಗಳೂರು ನಗರ ಹಾಗೂ ಹೊರವಲಯದಲ್ಲಿ ಸುಗಮ ಸಂಚಾರ ಖಾತ್ರಿಪಡಿಸಲು ವಿಸ್ತೃತ ಸಂಚಾರ ಯೋಜನೆ ಸಿದ್ಧಪಡಿಸಲಾಗಿದೆ. 2037ರ ವೇಳೆಗೆ ಹೆಚ್ಚುವರಿಯಾಗಿ 312 ಕಿ.ಮೀ. ಮೆಟ್ರೋ ಸಂಪರ್ಕ ವಿಸ್ತರಿಸಲು ಉದ್ದೇಶಿಸಲಾಗಿದೆ. 72 ಕಿ.ಮೀ. ಹೆಚ್ಚುವರಿ ಸಬ್‌ಅರ್ಬನ್ ರೈಲು ಸಂಪರ್ಕ, 210 ಕಿ.ಮೀ. ಹೆಚ್ಚುವರಿ ವರ್ತುಲ ರಸ್ತೆ ಹಾಗೂ 10 ಹಬ್‌ಗಳನ್ನು ಸಂಪರ್ಕಿಸುವ ಯೋಜನೆಗಳ ಕುರಿತು ಚರ್ಚಿಸಲಾಯಿತು. ಪಿಆರ್‌ಆರ್ ಹಂತ-2ನ್ನು ನೈಸ್ ರಸ್ತೆಯೊಂದಿಗೆ ಜೋಡಿಸುವ ಪ್ರಸ್ತಾವನೆಯೂ ಸಭೆಯಲ್ಲಿ ಚರ್ಚೆಯಾಯಿತು.
ಬೆಂಗಳೂರು-ತುಮಕೂರು, ಬೆಂಗಳೂರು-ಮೈಸೂರು ಹಾಗೂ ಬೆಂಗಳೂರು-ಕೆಜಿಎಫ್ ಮೂರು ಕಾರಿಡಾರ್‌ಗಳನ್ನು ಸಂಪರ್ಕಿಸುವ 270 ಕಿ.ಮೀ. ವ್ಯಾಪ್ತಿಯ ಆರ್‌ಆರ್‌ಟಿಎಸ್ ರಸ್ತೆ ನಿರ್ಮಾಣ ಹಾಗೂ ಪ್ರಸ್ತಾವಿತ ಮುಂಬೈ-ಬೆಂಗಳೂರು ಹೈಸ್ಪೀಡ್ ರೈಲನ್ನು ಮೈಸೂರಿನವರೆಗೆ ವಿಸ್ತರಿಸುವ ಕುರಿತು ಸಭೆಯಲ್ಲಿ ಅಭಿಪ್ರಾಯಗಳು ವ್ಯಕ್ತವಾದವು.
ನೀರಿನ ಸೌಲಭ್ಯ :
ಬಿಎಂಆರ್ ವ್ಯಾಪ್ತಿಯಲ್ಲಿ 2037ರ ವೇಳೆಗೆ 3,600 ಎಂಎಲ್‌ಡಿ ನೀರಿನ ಅಗತ್ಯವಿದೆ. ಕುಡಿಯುವ ಹಾಗೂ ಕೈಗಾರಿಕಾ ಉದ್ದೇಶಗಳಿಗೆ ಅಗತ್ಯವಿರುವ ನೀರು ಒದಗಿಸುವ ಕುರಿತು ಯೋಜನೆ ರೂಪಿಸುವ ಬಗ್ಗೆ ಚರ್ಚಿಸಲಾಯಿತು.
ಮುಂದಿನ 10 ವರ್ಷಗಳಲ್ಲಿ ನಗರದ ಕುಡಿಯುವ ನೀರು ಹಾಗೂ ಕೈಗಾರಿಕಾ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಸಂಸ್ಕರಿಸಿದ ನೀರಿನ ಮರುಬಳಕೆ, ಕೆರೆಗಳನ್ನು ತುಂಬಿಸುವುದು ಸೇರಿದಂತೆ ವಿವಿಧ ಯೋಜನೆಗಳಿಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಸೂಚಿಸಿದರು.
ವಸತಿ ಸೌಲಭ್ಯ :
ಪ್ರತಿಯೊಬ್ಬರಿಗೂ ಕೈಗೆಟಕುವ ದರದಲ್ಲಿ ವಸತಿ ಸೌಲಭ್ಯ ಕಲ್ಪಿಸುವುದು ಸರ್ಕಾರದ ಬದ್ಧತೆಯಾಗಿದೆ. ಈ ನಿಟ್ಟಿನಲ್ಲಿ 6ರಿಂದ 6.5 ಲಕ್ಷ ಮನೆಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಕೈಗಾರಿಕೆಗಳಲ್ಲಿ ಕೆಲಸ ಮಾಡುವ 40ರಿಂದ 50 ಸಾವಿರ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ.






