ಕರ್ನಾಟಕದ ಕರಾವಳಿ ಅಭಿವೃದ್ಧಿಗೆ ಸಮಗ್ರ ಯೋಜನೆ: ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ ಪ್ರಸ್ತಾವನೆ

ಡಾ.ರೊನಾಲ್ಡ್ ಕೊಲಾಸೊ
ಬೆಂಗಳೂರು: ಎನ್ಆರ್ಐ ಉದ್ಯಮಿ ಡಾ. ರೊನಾಲ್ಡ್ ಕೊಲಾಸೊ ಅವರು ಕರ್ನಾಟಕದ ಕರಾವಳಿ ಪ್ರದೇಶದ ಸಮಗ್ರ ಪ್ರವಾಸೋದ್ಯಮ ಹಾಗೂ ವಾಣಿಜ್ಯ ಅಭಿವೃದ್ಧಿಗಾಗಿ ಮಹತ್ವಾಕಾಂಕ್ಷೆಯ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಈ ಪ್ರಸ್ತಾವನೆಯನ್ನು ಸಚಿವ ಕೆ.ಹೆಚ್. ಮುನಿಯಪ್ಪ ಹಾಗೂ ವಿಧಾನ ಪರಿಷತ್ ಸದಸ್ಯೆ ಡಾ. ಆರತಿ ಕೃಷ್ಣ ಅವರ ಸಮ್ಮುಖದಲ್ಲಿ ಡಾ. ರೊನಾಲ್ಡ್ ಕೊಲಾಸೊ ಮಂಡಿಸಿದರು.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಕರಾವಳಿ ಕರ್ನಾಟಕವನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮ, ವಾಣಿಜ್ಯ, ಹೂಡಿಕೆ ಮತ್ತು ಉದ್ಯೋಗದ ಪ್ರಮುಖ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವುದು ಪ್ರಸ್ತಾವನೆಯ ಪ್ರಮುಖ ಉದ್ದೇಶವಾಗಿದೆ.
ಈ ಉದ್ದೇಶಕ್ಕಾಗಿ ತಜ್ಞರು, ಅಧಿಕಾರಿಗಳು, ಪ್ರವಾಸೋದ್ಯಮ ಕ್ಷೇತ್ರದ ಪರಿಣಿತರು, ನಗರ ಯೋಜಕರು, ಉದ್ಯಮಿಗಳು, ಬಂದರು ಮತ್ತು ಸಾರಿಗೆ ತಜ್ಞರು ಹಾಗೂ ಎನ್ಆರ್ಐ ಪ್ರತಿನಿಧಿಗಳನ್ನು ಒಳಗೊಂಡ ಕರ್ನಾಟಕ ಕರಾವಳಿ ಪ್ರವಾಸೋದ್ಯಮ ಮತ್ತು ವಾಣಿಜ್ಯ ಅಭಿವೃದ್ಧಿ ಟಾಸ್ಕ್ ಫೋರ್ಸ್ ರಚಿಸುವಂತೆ ಡಾ. ಕೊಲಾಸೊ ಸಲಹೆ ನೀಡಿದ್ದಾರೆ.
ಮುಂದಿನ 20ರಿಂದ 25 ವರ್ಷಗಳ ಸಮಗ್ರ ಕರಾವಳಿ ಅಭಿವೃದ್ಧಿ ಮಾಸ್ಟರ್ ಪ್ಲಾನ್ ರೂಪಿಸಿ, ಬೀಚ್ ಪ್ರವಾಸೋದ್ಯಮ, ರೆಸಾರ್ಟ್ಗಳು, ಕನ್ವೆನ್ಷನ್ ಸೆಂಟರ್ಗಳು, ಮರೀನಾ, ವಾಟರ್ ಸ್ಪೋರ್ಟ್ಸ್, ವಾಟರ್ಫ್ರಂಟ್ಗಳು, ವಾಟರ್ ಟ್ಯಾಕ್ಸಿ, ವಾಣಿಜ್ಯ ಕೇಂದ್ರಗಳು, ಲಾಜಿಸ್ಟಿಕ್ಸ್ ಹಾಗೂ ಪ್ರವಾಸೋದ್ಯಮ ಆಧಾರಿತ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಪ್ರಸ್ತಾವನೆ ಇದಾಗಿದೆ.
ಅದೇ ವೇಳೆ ಪರಿಸರ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಮ್ಯಾಂಗ್ರೂವ್ಗಳು, ಜಲಭೂಮಿಗಳು, ನೈಸರ್ಗಿಕ ಜಲಮಾರ್ಗಗಳು, ಕಡಲತೀರಗಳು ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳನ್ನು ರಕ್ಷಿಸುವುದರ ಜೊತೆಗೆ ಯಾವುದೇ ಹೊಸ ಅಭಿವೃದ್ಧಿಯಿಂದ ಸಮುದ್ರ ಅಥವಾ ಹಿನ್ನೀರಿಗೆ ಸಂಸ್ಕರಿಸದ ಕೊಳಚೆ ನೀರು ಸೇರುವುದನ್ನು ಸಂಪೂರ್ಣವಾಗಿ ತಡೆಯುವಂತೆ ಪ್ರಸ್ತಾವಿಸಲಾಗಿದೆ.
ದುಬೈ, ಸಿಂಗಾಪುರ, ಮಲೇಷ್ಯಾ, ಹಾಂಗ್ಕಾಂಗ್, ಸ್ಪೇನ್ ಮತ್ತು ಇಟಲಿ ಸೇರಿದಂತೆ ವಿಶ್ವದ ಯಶಸ್ವಿ ಕರಾವಳಿ ನಗರಗಳ ಅಭಿವೃದ್ಧಿ ಮಾದರಿಗಳನ್ನು ಅಧ್ಯಯನ ಮಾಡಿ, ಕರ್ನಾಟಕದ ಪರಿಸರ ಮತ್ತು ಕಾನೂನು ವ್ಯವಸ್ಥೆಗೆ ಹೊಂದುವ ಮಾದರಿಯನ್ನು ರೂಪಿಸಬೇಕು ಎಂದು ಡಾ. ಕೊಲಾಸೊ ಸಲಹೆ ನೀಡಿದ್ದಾರೆ.
ಕರಾವಳಿ ಅಭಿವೃದ್ಧಿಯ ಮೂಲಕ ಸ್ಥಳೀಯ ಯುವಕರಿಗೆ ಉದ್ಯೋಗ, ಮೀನುಗಾರರು, ರೈತರು, ಕುಶಲಕರ್ಮಿಗಳು, ಸಣ್ಣ ವ್ಯಾಪಾರಿಗಳು ಹಾಗೂ ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ, ಜಾಗತಿಕ ಮಟ್ಟದಲ್ಲಿ ಯಶಸ್ವಿಯಾಗಿರುವ ಕನ್ನಡಿಗರು ಮತ್ತು ಎನ್ಆರ್ಐ ಹೂಡಿಕೆದಾರರನ್ನು ಕರ್ನಾಟಕದ ಕರಾವಳಿ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವಂತೆ ಆಹ್ವಾನಿಸುವ ಯೋಜನೆಯನ್ನೂ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಪ್ರಸ್ತಾವನೆ ಅನುಷ್ಠಾನಗೊಂಡರೆ ಕರ್ನಾಟಕದ ಕರಾವಳಿ ಪ್ರದೇಶದ ಪ್ರವಾಸೋದ್ಯಮ, ಹೂಡಿಕೆ, ಉದ್ಯೋಗ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ಸಾಧ್ಯತೆಯಿದೆ.






