ಶಾಸಕ ರಾಜಾ ವೆಂಕಟಪ್ಪ ನಾಯಕ್ ನಿಧನಕ್ಕೆ ಸಂತಾಪ: ಉಭಯ ಸದನಗಳ ಕಲಾಪ ಬುಧವಾರಕ್ಕೆ ಮುಂದೂಡಿಕೆ

ಬೆಂಗಳೂರು: ವಿಧಾನಸಭೆಯ ಕಾಂಗ್ರೆಸ್ ಪಕ್ಷದ ಹಾಲಿ ಸದಸ್ಯ ರಾಜಾ ವೆಂಕಟಪ್ಪ ನಾಯಕ ಅವರು ನಿಧನರಾದ ಹಿನ್ನೆಲೆಯಲ್ಲಿ ವಿಧಾನ ಮಂಡಲ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಿ, ಅವರ ಗೌರವಾರ್ಥ ಯಾವುದೇ ಕಾರ್ಯಕಲಾಪಗಳನ್ನು ನಡೆಸದೆ ಅಧಿವೇಶನವನ್ನು ಬುಧವಾರಕ್ಕೆ(ಫೆ.28) ಮುಂದೂಡಲಾಯಿತು.
ಸೋಮವಾರ ಅಧಿವೇಶನದಲ್ಲಿ ಸಂತಾಪ ಸೂಚನೆ ಬಳಿಕ ಕಲಾಪದಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ (ಫೆ.28) ಬೆಳಗ್ಗೆ 9.30ಕ್ಕೆ 2024-25ನೆ ಸಾಲಿನ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಲಿದ್ದಾರೆಂದು ತಿಳಿಸಿ, ಸದನವನ್ನು ಬುಧವಾರ ಬೆಳಗ್ಗೆ 9.15ಕ್ಕೆ ಮುಂದೂಡುವುದಾಗಿ ಪ್ರಕಟಿಸಿದರು.
ಸದನ ಪ್ರಾರಂಭವಾದಾಗ ಸ್ಪೀಕರ್ ಯು.ಟಿ.ಖಾದರ್ ಅವರು, ಶಾಸಕ ರಾಜಾ ವೆಂಕಟಪ್ಪ ನಾಯಕ್ ನಿನ್ನೆ ನಿಧನರಾಗಿರುವುದನ್ನು ಸದನಕ್ಕೆ ತಿಳಿಸಿ ಸಂತಾಪ ನಿರ್ಣಯವನ್ನು ಮಂಡಿಸಿದರು. ರಾಜಾ ವೆಂಕಟಪ್ಪ ನಾಯಕ ಅವರು 1957ರ ನವೆಂಬರ್ 23ರಂದು ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಜನಿಸಿದ್ದರು. ವೃತ್ತಿಯಲ್ಲಿ ಕೃಷಿಕರಾಗಿದ್ದ ಅವರು, 1987ರಲ್ಲಿ ಪೇಠ ಅಮ್ಮಾಪುರ ಮಂಡಲ ಪಂಚಾಯಿತಿಯ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿ ಅದೇ ಅವಧಿಯಲ್ಲಿ ಮಂಡಲ ಪ್ರಧಾನರಾಗಿ ಸೇವೆ ಸಲ್ಲಿಸುವ ಮೂಲಕ ಜನಾನುರಾಗಿಯಾಗಿದ್ದರು.
1994ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಚುನಾಯಿತರಾಗಿದ್ದ ಅವರು, 1999, 2013 ಹಾಗೂ 2023 ರಲ್ಲಿ ಹದಿನಾರನೇ ವಿಧಾನಸಭೆಗೆ ಆಯ್ಕೆಯಾಗಿ ಪ್ರಸ್ತುತ ಸದನದಲ್ಲಿ ಸದಸ್ಯರಾಗಿ ಸಕ್ರಿಯರಾಗಿದ್ದರು. ಇತ್ತೀಚೆಗೆ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಎಲ್ಲಾ ಸಮುದಾಯದ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಸರಳ ಸಜ್ಜನಿಕೆಯ ನಾಯಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ದ್ವೇಷ, ಕೋಪ, ಸಣ್ಣಪುಟ್ಟ ವಿಚಾರಕ್ಕೆ ತೊಂದರೆ ಕೊಡುವುದರಿಂದ ಮುಂದೆ ಪಶ್ಚಾತ್ತಾಪ ಪಡಬೇಕಾಗಬಹುದು. ದ್ವೇಷರಹಿತ, ಅಸೂಯೆ ರಹಿತ ಜೀವನ ನಡೆಸುವಂತಾಗಲಿ ಎಂದು ಹೇಳಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ನಿಧನ ಅತ್ಯಂತ ನೋವು ತಂದಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜಾ ವೆಂಕಟಪ್ಪ ನಾಯಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ನೋಡಲು ಹೋಗಿದ್ದೆ. ಆಗ ಅವರು ತುರ್ತು ಚಿಕಿತ್ಸಾ ಘಟಕದಲ್ಲಿದ್ದರು. ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎನ್ನಿಸಿರಲಿಲ್ಲ. ಕಾಂಗ್ರೆಸ್ ನಿಷ್ಠಾವಂತ ಶಾಸಕ, ನಾಲ್ಕು ಬಾರಿ ಶಾಸಕರಾಗಿದ್ದು, ಅತ್ಯಂತ ಸರಳ, ಸಜ್ಜನಿಕೆಯಿಂದ ಇದ್ದರು. ತಮ್ಮ ಜಿಲ್ಲೆ ಹಾಗೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಳಕಳಿ ಹೊಂದಿದ್ದರು. ತಮ್ಮ ಅನಾರೋಗ್ಯವನ್ನು ಲೆಕ್ಕಿಸದೆ ಜನಪರ ಕಾರ್ಯ ಮಾಡುತ್ತಿದ್ದರು ಎಂದು ನುಡಿದರು.
ಇನ್ನೂ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೂ ಆಪ್ತರಾಗಿದ್ದರು. ಅವರನ್ನು ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಅವರ ಕುಟುಂಬ ವರ್ಗದವರಿಗೆ ರಾಜಾ ವೆಂಕಟಪ್ಪ ನಾಯಕರವರ ಅಗಲಿಕೆಯ ದುಃಖ ಭರಿಸಲಿ ಎಂದು ಹೇಳಿದರು.
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ರಾಜಾ ವೆಂಕಟಪ್ಪ ನಾಯಕ ಅವರ ಐದು ವರ್ಷ ಈ ಸದನದ ಸದಸ್ಯರಾಗಿರುವಂತೆ ಚುನಾವಣಾ ಆಯೋಗ ಗ್ಯಾರಂಟಿ ಕೊಟ್ಟಿತ್ತು. ಆದರೆ ವಿಧಿ ಅವಕಾಶ ಮಾಡಿಕೊಡಲಿಲ್ಲ. ಸರಳ, ಸಜ್ಜನಿಕೆಯುಳ್ಳವರಾಗಿದ್ದ ಅವರು, ಅವರಾಯಿತು, ಅವರ ಕ್ಷೇತ್ರವಾಯಿತು ಎಂಬಂತಿದ್ದರು ಎಂದು ಸ್ಮರಿಸಿದರು.
ಸಚಿವರಾದ ಮಧು ಬಂಗಾರಪ್ಫ, ಝಮೀರ್ ಅಹ್ಮದ್ ಖಾನ್, ಪ್ರಿಯಾಂಕ್ ಖರ್ಗೆ, ಡಾ.ಶರಣ ಪ್ರಕಾಶ್ ಪಾಟೀಲ್, ಸದಸ್ಯರಾದ ಮಾನಪ್ಪ ವಜ್ಜಲ್, ಆರಗ ಜ್ಞಾನೇಂದ್ರ, ಅಜಯ್ ಧರ್ಮಸಿಂಗ್, ನಾಗರಾಜ, ಎನ್.ಟಿ.ಶ್ರೀನಿವಾಸ್ ಸೇರಿದಂತೆ ಹಲವರು ಮಾತನಾಡಿ, ರಾಜಾ ವೆಂಕಟಪ್ಪ ನಾಯಕ ಅವರ ಸೇವೆಯನ್ನು ಸ್ಮರಿಸಿ, ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ಸದನದ ಸದಸ್ಯರೆಲ್ಲ ಎದ್ದು ನಿಂತು ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಸಂತಾಪ ಸೂಚಿಸಿದರು. ಸದನದಲ್ಲಿ ಕೈಗೊಂಡ ಸಂತಾಪ ನಿರ್ಣಯದ ಪ್ರತಿಯನ್ನು ಅವರ ಕುಟುಂಬ ವರ್ಗಕ್ಕೆ ಕಳುಹಿಸಿಕೊಡುವುದಾಗಿ ಸ್ಪೀಕರ್ ಪ್ರಕಟಿಸಿದರು.
ಪರಿಷತ್ತು: ರಾಜಾ ವೆಂಕಟಪ್ಪ ನಾಯಕ ಅವರಿಗೆ ವಿಧಾನ ಪರಿಷತ್‍ನಲ್ಲಿ ಸಂತಾಪ ಸೂಚಿಸಲಾಗಿದೆ. ಪಕ್ಷಾತೀತವಾಗಿ ವೆಂಕಟಪ್ಪ ನಾಯಕರ ಕೊಡುಗೆಯನ್ನು ಸ್ಮರಿಸಲಾಯಿತು. ನಂತರ ಕಲಾಪವನ್ನು ಫೆ.28ರ ಬೆಳಗ್ಗೆ 9.30ಕ್ಕೆ ಮುಂದೂಡಿಕೆ ಮಾಡಲಾಯಿತು.
ಕಲಾಪ ಆರಂಭಗೊಳ್ಳುತ್ತಿದ್ದಂತೆ ರಾಜಾ ವೆಂಕಟಪ್ಪ ನಾಯಕ ನಿಧನಕ್ಕೆ ಸಂತಾಪ ಸೂಚನೆ ಮಂಡಿಸಲಾಯಿತು. ಸಂತಾಪ ಸೂಚನೆ ಓದಿದ ಸಭಾಪತಿ ಬಸವರಾಜ್ ಹೊರಟ್ಟಿ ಅಗಲಿದ ಶಾಸಕರ ಕೊಡುಗೆಯನ್ನು ಸ್ಮರಿಸಿದರು. ನಂತರ ಸರಕಾರ ಪರವಾಗಿ ಕಾನೂನು ಸಚಿವ ಎಚ್.ಕೆ ಪಾಟೀಲ್ ಸಂತಾಪ ಸೂಚನೆ ಬೆಂಬಲಿಸಿ ಮಾತನಾಡಿದರು.







