ಇ20 ಎಥೆನಾಲ್ ಮಿಶ್ರಣದ ಪರಿಣಾಮ; ಜಾಗೃತಿ ಮೂಡಿಸಲು ಕಾಂಗ್ರೆಸ್‍ನಿಂದ ಸಹಿ ಸಂಗ್ರಹ

ಬೆಂಗಳೂರು 1: ಕೇಂದ್ರ ಬಿಜೆಪಿ ಸರಕಾರ ಜಾರಿಗೆ ತಂದಿರುವ ಇ20 ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯಿಂದ ವಾಹನಗಳ ಇಂಜಿನ್ ಕಾರ್ಯಕ್ಷಮತೆ, ಬಿಡಿಭಾಗಗಳ ಬಾಳಿಕೆ ಹಾಗೂ ವಾಹನ ನಿರ್ವಹಣೆಯ ವೆಚ್ಚದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬುಧವಾರ ನಗರದ ಕಾಂಗ್ರೆಸ್ ಭವನದ ಎದುರು ಕಾಂಗ್ರೆಸ್ ಕಾರ್ಯಕರ್ತರು ಸಹಿ ಸಂಗ್ರಹ ಅಭಿಯಾನ ನಡೆಸಿದ್ದಾರೆ.
ಅಭಿಯಾನದಲ್ಲಿ ವಾಹನ ಸವಾರರು, ಸಾರ್ವಜನಿಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದರು. ಎಥೆನಾಲ್ ಮಿಶ್ರಣದಿಂದ ಉಂಟಾಗಬಹುದಾದ ತಾಂತ್ರಿಕ ಸಮಸ್ಯೆಗಳು, ಹಳೆಯ ವಾಹನಗಳ ಹೊಂದಾಣಿಕೆ, ಇಂಧನ ದಕ್ಷತೆ ಹಾಗೂ ವಾಹನಗಳ ನಿರ್ವಹಣಾ ವೆಚ್ಚದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.
ಈ ವೇಳೆ ಮಾತನಾಡಿದ ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಎಸ್.ಮನೋಹರ್, ಪರಿಸರ ಸಂರಕ್ಷಣೆ ಮತ್ತು ಇಂಧನ ಆಮದು ಅವಲಂಬನೆ ಕಡಿಮೆ ಮಾಡುವ ಉದ್ದೇಶಗಳನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ. ಆದರೆ, ಇಂತಹ ನೀತಿಗಳನ್ನು ಜಾರಿಗೊಳಿಸುವ ಮೊದಲು ವಾಹನಗಳ ಸುರಕ್ಷತೆ, ಗ್ರಾಹಕರ ಹಿತಾಸಕ್ತಿ ಮತ್ತು ವಾಹನ ತಯಾರಕರ ತಾಂತ್ರಿಕ ಮಾರ್ಗಸೂಚಿಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಸಾರ್ವಜನಿಕರಿಗೆ ಯಾವುದೇ ತೊಂದರೆ ಅಥವಾ ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗದಂತೆ ಇ20 ನೀತಿಯ ಪರಿಣಾಮಗಳ ಕುರಿತು ಕೇಂದ್ರ ಸರಕಾರ ಪಾರದರ್ಶಕವಾಗಿ ಮಾಹಿತಿ ನೀಡಬೇಕು. ವಾಹನ ಸವಾರರ ಆತಂಕಗಳಿಗೆ ವೈಜ್ಞಾನಿಕ ಆಧಾರದ ಮೇಲೆ ಉತ್ತರ ನೀಡಬೇಕು ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎ.ಆನಂದ್, ಕುಶಾಲ್ ಹರುವೆಗೌಡ, ಲಕ್ಷ್ಮೀನಾರಾಯಣ್, ಪ್ರಕಾಶ್, ಮಾರನ್, ಉಮೇಶ್, ರಂಜಿತ್, ಆನಂದ್ ಕುಮಾರ್, ನವೀನ್ ಸಾಯಿ, ಮಂಜುನಾಥ್, ಬಾಲಾಜಿ ಡಿ, ಓಬಳೇಶ್, ಅಜಯ್, ವೆಂಕಟೇಶ್, ಇಮ್ರಾನ್ ಮತ್ತಿತರರು ಹಾಜರಿದ್ದರು.






