ರಾಹುಲ್‍ರಿಂದ ಕಾಂಗ್ರೆಸ್ಸಿಗೆ ಭವಿಷ್ಯವಿಲ್ಲ, ದೇಶಕ್ಕೆ ಹಿತ ಇಲ್ಲ: ಬಿಜೆಪಿ ಶಾಸಕ ಸುರೇಶ್ ಕುಮಾರ್

ಬೆಂಗಳೂರು: ಲೋಕಸಭೆಯಲ್ಲಿ ದುರಾದೃಷ್ಟದಂತೆ ರಾಹುಲ್ ಗಾಂಧಿಯವರು ಪ್ರತಿಪಕ್ಷ ನಾಯಕರಾಗಿದ್ದಾರೆ. ಹೀಗಾಗಿ ರಾಹುಲ್ ಪ್ರತಿಪಕ್ಷ ನಾಯಕರಾಗಿರುವವರೆಗೆ ಕಾಂಗ್ರೆಸ್ಸಿಗೆ ಭವಿಷ್ಯವಿಲ್ಲ, ದೇಶಕ್ಕೆ ಹಿತ ಇಲ್ಲ ಎಂದು ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಟೀಕಿಸಿದ್ದಾರೆ.
ಶನಿವಾರ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಹುಲ್ ಗಾಂಧಿಗೆ ರಚನಾತ್ಮಕತೆಯ ಅರಿವೇ ಇಲ್ಲ. ನಡೆ-ನುಡಿಯಲ್ಲಿ ವಿಶ್ವಾಸಾರ್ಹತೆಗಳಿಸದ ಒಬ್ಬ ವ್ಯಕ್ತಿ. ರಾಹುಲ್ ಗಾಂಧಿ ವಿಪಕ್ಷ ನಾಯಕರಾಗಿ ಮುಂದುವರೆಸುವುದು ದೇಶಕ್ಕೆ ಹಾನಿಕರ’ ಎಂದು ವಿಶ್ಲೇಷಿಸಿದರು.
ಹಿಂದಿನ ಲೋಕಸಭಾ ವಿಪಕ್ಷ ನಾಯಕರ ಸಾಮಥ್ರ್ಯ, ತಿಳಿವಳಿಕೆ, ವಿಶ್ವಾಸಾರ್ಹತೆ, ಅಗತ್ಯ ಬಿದ್ದಾಗ ದೇಶಕ್ಕೆ, ಆಳುವ ಪಕ್ಷಕ್ಕೆ ಮಾರ್ಗದರ್ಶನ ಮಾಡುತ್ತಿದ್ದ ರೀತಿಯನ್ನು ಗಮನಿಸಿ ಹೋಲಿಸಿದರೆ, ಭಾರತದ ಲೋಕಸಭೆಯ ದುರಾದೃಷ್ಟದಂತೆ ರಾಹುಲ್ ಗಾಂಧಿಯವರು ವಿಪಕ್ಷ ನಾಯಕರಾಗಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ನಿನ್ನೆ ಫ್ರೀಡಂ ಪಾರ್ಕಿನಲ್ಲಿ ರಾಹುಲ್ ಭಾಷಣ ಮಾಡಿದ್ದಾರೆ. ಅಲ್ಲಿಂದ ಚುನಾವಣಾ ಆಯೋಗದ ಕಚೇರಿಗೆ 500 ಮೀಟರ್ ದೂರ. ಭಾಷಣ ಮುಗಿಸಿ ಅಲ್ಲಿಗೆ ಹೋಗಿ ದೂರು ಕೊಡುವುದನ್ನು ಬಿಟ್ಟು ಹಿಟ್ ಆಂಡ್ ರನ್, ಸ್ಪಿಟ್ ಆಂಡ್ ರನ್ ಮಾಡಿದ್ದಾರೆ. ಕೇಳಿದರೆ ನಾನು ಪ್ರತಿಜ್ಞೆ ಪಡೆಯುವುದಿಲ್ಲ, ನನ್ನ ಶಬ್ದಗಳೇ ಪ್ರತಿಜ್ಞೆ ಎನ್ನುತ್ತಾರೆ ಎಂದು ಸುರೇಶ್ ಕುಮಾರ್ ಟೀಕಿಸಿದರು.
ದೂರುವವರು ಇವರು. ದೂರು ಕೊಡಲು ಡಿ.ಕೆ.ಶಿವಕುಮಾರರನ್ನು ಕಳುಹಿಸಿದ್ದಾರೆ. ಒಂದು ಕುಟುಂಬಕ್ಕೆ ಸೇರಿದವರು ಎಂಬ ಕಾರಣಕ್ಕೆ ರಾಹುಲ್ ಠೇಂಕಾರ, ಅಹಂಕಾರದ ನಡವಳಿಕೆ. ನಾನು ಚುನಾವಣಾ ಆಯೋಗಕ್ಕೆ ದೂರು ಕೊಡುವುದಿಲ್ಲ. ಚೀನಾದ ವಿಷಯ ಬಂದಾಗ ನೀವು ನಿಜವಾದ ಭಾರತೀಯರೇ ಎಂದು ಸುಪ್ರೀಂ ಕೋರ್ಟ್ ಕೇಳಿದರೆ, ಅವರ ಸಹೋದರಿ ಸುಪ್ರೀಂ ಕೋರ್ಟಿನವರು ಯಾರೆಂದು ಪ್ರಶ್ನಿಸುತ್ತಾರೆ ಎಂದು ಆಕ್ಷೇಪಿಸಿದರು.
ಭಾಷಣ ಟುಸ್ ಪಟಾಕಿ:
ರಾಜಾಜಿನಗರ, ಬೆಂಗಳೂರಿಗೆ ಬಹಳಷ್ಟು ಜನರು ವ್ಯಾಪಾರದ ನಿರೀಕ್ಷೆಯಲ್ಲಿ ಶಿವಕಾಶಿಯಿಂದ ಪಟಾಕಿ ತರುತ್ತಾರೆ. ಅವರ ಗ್ರಹಚಾರಕ್ಕೆ ಮಳೆ ಬರುತ್ತದೆ. ಆ ಪಟಾಕಿಯೆಲ್ಲ ಟುಸ್ ಆಗಿಬಿಡುತ್ತದೆ. ನಿನ್ನೆ ರಾಹುಲ್ ಗಾಂಧಿಯವರ ಭಾಷಣ ಶಿವಕಾಶಿಯಿಂದ ತಂದು ಮಳೆಯಲ್ಲಿ ನೆನೆದ ಟುಸ್ ಪಟಾಕಿ ಆಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.







