ಗಾಂಧೀಜಿಗೆ ಅಪಮಾನ ಮಾಡಿದ್ದೇ ಕಾಂಗ್ರೆಸ್: ಗೋವಿಂದ ಕಾರಜೋಳ ಆರೋಪ

ಬೆಂಗಳೂರು: ನರೇಗಾದಡಿ ಜಾರಿಗೆ ತಂದಿರುವ ವಿನೂತನ ತಂತ್ರಜ್ಞಾನ ಹಾಗೂ ಪಾರದರ್ಶಕ ವ್ಯವಸ್ಥೆಗಳು ಕಾಂಗ್ರೆಸ್ಗೆ ದೊಡ್ಡ ಸವಾಲಾಗಿ ಪರಿಣಮಿಸಿವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಹಿಂದೆ ಭ್ರಷ್ಟಾಚಾರದ ಮೂಲಕ ಖಜಾನೆಯಿಂದ ಹಣ ಎತ್ತಿಕೊಂಡು ಹೋಗಲಾಗುತ್ತಿತ್ತು. ಈಗ ಅದು ಸಾಧ್ಯವಾಗದಂತಾಗಿದೆ. ಅದೇ ಕಾಂಗ್ರೆಸ್ ನಾಯಕರ ಹೊಟ್ಟೆ ಉರಿಯ ಕಾರಣ,” ಎಂದು ಟೀಕಿಸಿದರು.
ಗಾಂಧಿ ಹೆಸರನ್ನು ಅಳಿಸಿದವರು ಯಾರು ಎಂಬುದಕ್ಕೆ ಉದಾಹರಣೆ ನೀಡಿದ ಕಾರಜೋಳ, “ರಾಜ್ಯದಲ್ಲಿ 25 ಯೋಜನೆಗಳಿಗೆ ರಾಜೀವ್ ಗಾಂಧಿ ಮತ್ತು ಇಂದಿರಾ ಗಾಂಧಿ ಹೆಸರು ಇಡಲಾಗಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ 55ಕ್ಕೆ ರಾಜೀವ್ ಗಾಂಧಿ, 21ಕ್ಕೆ ಇಂದಿರಾ ಗಾಂಧಿ ಹಾಗೂ 22ಕ್ಕೆ ನೆಹರೂ ಹೆಸರು ಇವೆ,” ಎಂದು ಹೇಳಿದರು.
“ಪ್ರತಿಯೊಂದು ಕ್ರೀಡಾಕೂಟಕ್ಕೂ ರಾಜೀವ್ ಗಾಂಧಿ, ರಾಹುಲ್ ಗಾಂಧಿ, ಇಂದಿರಾ ಗಾಂಧಿ ಹೆಸರು ಇಟ್ಟುಕೊಂಡು ಜನರಿಗೆ ಮೋಸ ಮಾಡಲಾಗಿದೆ. ನಿಜವಾದ ಮಹಾತ್ಮ ಗಾಂಧಿಯನ್ನು ಮರೆಸಿದವರು ಇವರೇ,” ಎಂದು ಅವರು ಆರೋಪಿಸಿದರು.
ನರೇಗಾ ಯೋಜನೆಯಡಿ ಈಗ ಎಲ್ಲ ವರ್ಗದವರಿಗೂ ಅವಕಾಶ ನೀಡಲಾಗಿದೆ. ಯಾರು ಬೇಕಾದರೂ ಕೆಲಸಕ್ಕೆ ಬರಬಹುದು. ಹಾಗೆಂದು ಶ್ರೀಮಂತ ವರ್ಗದವರು ಕೂಲಿ ಕೆಲಸಕ್ಕೆ ಬರುವುದಿಲ್ಲ ಎಂದರು.
“ಗಾಂಧೀಜಿಗೆ ಅಪಮಾನ ಮಾಡಿದ ಕಾಂಗ್ರೆಸ್, ಡಾ. ಅಂಬೇಡ್ಕರರಿಗೂ ಅಪಮಾನ ಮಾಡಿದೆ. ಅಂಬೇಡ್ಕರ್ ನಿಧನರಾದಾಗ ಅವರ ಸಮಾಧಿಗೆ ಆರಡಿ ಜಾಗವನ್ನೂ ನೀಡಲಿಲ್ಲ. ಅಪಾರ ಪಾಂಡಿತ್ಯ ಮತ್ತು ಜ್ಞಾನ ಹೊಂದಿದ್ದ ಅಂಬೇಡ್ಕರ್ ಅವರಿಗೆ ಜೀವಿತಾವಧಿಯಲ್ಲಿ ಭಾರತರತ್ನ ನೀಡಲಿಲ್ಲ. ಅವರ ಕುಟುಂಬದವರಿಗೆ ಮಾತ್ರ ಸೌಲಭ್ಯ ಒದಗಿಸಿದರು. ದೇಶಕ್ಕೆ ಸಂವಿಧಾನ ನೀಡಿದ ಅಂಬೇಡ್ಕರ್ ಅವರಿಗೆ ಗೌರವ ನೀಡದ ವಿಚಾರವನ್ನು ಜನರಿಗೆ ತಿಳಿಸಬೇಕಾಗಿದೆ,” ಎಂದು ಹೇಳಿದರು.
ಇಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹೆಸರನ್ನು ಯಾವುದೇ ಸಂಸ್ಥೆ ಅಥವಾ ಯೋಜನೆಗೆ ಇಟ್ಟುಕೊಂಡಿಲ್ಲ. ಸರ್ಕಾರದ ಹೆಸರಿನಲ್ಲೇ ಎಲ್ಲ ಯೋಜನೆಗಳು ನಡೆಯುತ್ತಿವೆ. ಆದರೆ ಐದು ವಿಮಾನ ನಿಲ್ದಾಣಗಳು, ಬಂದರುಗಳಿಗೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ ಹೆಸರು ಇಡಲಾಗಿದೆ. ಇಂತಹವರು ಮಹಾತ್ಮ ಗಾಂಧಿಯ ಬಗ್ಗೆ ಮಾತನಾಡುವ ನೈತಿಕತೆ ಹೊಂದಿರುವರೇ? ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ಅವರು ‘ವಿಕಸಿತ ಭಾರತ’ ಗುರಿಗೆ ಪೂರಕವಾಗಿ ವಿಬಿ–ಜಿ ರಾಮ್ ಜಿ ಯೋಜನೆಯನ್ನು ಜಾರಿಗೊಳಿಸಿದ್ದು, ಭ್ರಷ್ಟಾಚಾರ ತಡೆ, ಆಸ್ತಿ ನಿರ್ಮಾಣ ಹಾಗೂ ಗ್ರಾಮೀಣ ಪ್ರದೇಶದ ನಿಜವಾದ ಬಡವರಿಗೆ ಕೂಲಿ ಕೆಲಸ ಒದಗಿಸಲು ಇದು ಸಹಕಾರಿಯಾಗಲಿದೆ. ಹಿಂದೆ ನರೇಗಾದಲ್ಲಿ ಯಾವುದೇ ಹೊಣೆಗಾರಿಕೆ ಇರಲಿಲ್ಲ. ಈಗ ಲೆಕ್ಕ ನೀಡಬೇಕಾಗಿದೆ. ಅದೇ ಕಾಂಗ್ರೆಸ್ನ ಅಸಮಾಧಾನದ ಮೂಲ ಎಂದು ಕಾರಜೋಳ ಹೇಳಿದರು.







