ಸದನ ಹಾಳು ಮಾಡುವ ಕಾಂಗ್ರೆಸ್ : ಆರ್.ಅಶೋಕ್

ಬೆಂಗಳೂರು : ರಾಜ್ಯ ಸರಕಾರವು ಒಬ್ಬ ಸಚಿವನಿಗಾಗಿ ಸದನ ನಡೆಸಲು ಸಮಸ್ಯೆ ತಂದೊಡ್ಡಿದೆ. ನಾವು ನೈಸ್ ಅಕ್ರಮ, ಬಿಡದಿ ಟೌನ್‍ಶಿಪ್ ಹಾಗೂ ರಾಜ್ಯದಲ್ಲಿ ಬರಗಾಲದ ಕುರಿತು ಚರ್ಚಿಸಬೇಕಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಭ್ರಷ್ಟ, ದುಷ್ಟ ಸರಕಾರವನ್ನು ತೊಲಗಿಸುವವರೆಗೂ ಬಿಡುವುದಿಲ್ಲ. ನಾಳೆ(ಆ.21) ಮಹರ್ಷಿ ವಾಲ್ಮೀಕಿ ಪ್ರತಿಮೆಯಿಂದ ನಾವು ಹೋರಾಟ ಆರಂಭಿಸುತ್ತೇವೆ ಎಂದು ಪ್ರಕಟಿಸಿದರು.
ವಾಲ್ಮೀಕಿ ನಿಗಮದ ದಲಿತರಿಗೆ ಸೇರಬೇಕಿದ್ದ 189 ಕೋಟಿ ರೂ.ಹಣವನ್ನು ನುಂಗಿ ಹಾಕಿದ್ದಾರೆ. ನಾಲ್ಕು ದಿನಗಳಿಂದ ನಾವು ದಲಿತರ ಪರವಾಗಿ ಹೋರಾಟ ಮಾಡುತ್ತಿದ್ದೇವೆ. ಕೆಪಿಎಸ್ಸಿ ಅಕ್ರಮ, ಪಡಿತರ ಕಾರ್ಡ್‍ಗಳ ರದ್ಧತಿ ಕುರಿತು ಚರ್ಚೆ ನಡೆಯಬೇಕಾಗಿದೆ. ಆದರೂ ಸರಕಾರ ಹಠ ಹಿಡಿದು ಸದನವನ್ನು ಹಾಳು ಮಾಡುತ್ತಿದೆ ಎಂದು ಅವರು ಟೀಕಿಸಿದರು.
ಸಚಿವ ಸಂಪುಟ ರಚನೆಗೆ ಹಣ ಪಡೆದಿದ್ದು, ನಾಗೇಂದ್ರ ಅವರನ್ನು ಸಂಪುಟದಿಂದ ವಜಾ ಮಾಡುತ್ತಿಲ್ಲ. ಕಾಂಗ್ರೆಸ್ ಹಠ ಹಿಡಿದು ಚರ್ಚೆಗೆ ಅನುಮತಿ ಕೊಡುತ್ತಿಲ್ಲ. ಬರ ಪೀಡಿತ ಪ್ರದೇಶ ಎಂದು ಘೋಷಿಸಿಲ್ಲ. ಒಂದೇ ಒಂದು ನಯಾಪೈಸೆ ಹಣವನ್ನು ಬರ ಪರಿಹಾರಕ್ಕೆ ಈ ಸರಕಾರ ಬಿಡುಗಡೆ ಮಾಡಿಲ್ಲ. ಈ ಶಾಪ ಕಾಂಗ್ರೆಸ್ಸಿಗೆ ತಟ್ಟಲಿದೆ ಎಂದು ಅವರು ಎಚ್ಚರಿಸಿದರು.




