ಕಾಂಗ್ರೆಸ್ ಆಡಳಿತದಲ್ಲಿ ಖಜಾನೆ ಲೂಟಿ: ನರೇಂದ್ರ ಮೋದಿ ಆರೋಪ

ಬೆಂಗಳೂರು: ಕಾಂಗ್ರೆಸ್ ಆಡಳಿತದಲ್ಲಿ ಖಜಾನೆ ಲೂಟಿ ಆಗುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳಲ್ಲಿ ಬಿಜೆಪಿ ಜಯಬೇರಿ ಬಾರಿಸಿದ ಬಳಿಕ ಕರ್ನಾಟಕಕ್ಕೆ ಆಗಮಿಸಿದ ನರೇಂದ್ರ ಮೋದಿಯವರಿಗೆ ಬೆಂಗಳೂರಿನ ಎಚ್.ಎ.ಎಲ್ ವಿಮಾನ ನಿಲ್ದಾಣದ ಬಳಿ ರವಿವಾರ ಹಮ್ಮಿಕೊಂಡಿದ್ದ ಅಭಿನಂದಿಸುವ ಸಮಾರಂಭವನ್ನು ಅವರು ಮಾತನಾಡುತ್ತಿದ್ದರು.
"ನಿಮಗೆಲ್ಲ ನನ್ನ ನಮಸ್ಕಾರಗಳು" ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಬಂಗಾಲದಲ್ಲಿ ಮೊದಲ ಬಾರಿ ಬಿಜೆಪಿಗೆ ಇಷ್ಟು ದೊಡ್ಡ ಆಶೀರ್ವಾದ ಲಭಿಸಿದೆ. ಇದು ಕಾರ್ಯಕರ್ತರ ಶ್ರಮದ ಪರಿಣಾಮ. ಗುಜರಾತ್ನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಬಿಜೆಪಿ ದಾಖಲೆ ಗೆಲುವು ಲಭಿಸಿದೆ. ಇದು ಹೊಸ ಇತಿಹಾಸ ಬರೆಯುವ ಘಟನೆಗಳು ಎಂದು ವಿಶ್ಲೇಷಿಸಿದರು.
ಭಾರತದ ಜನರು ಸ್ಥಿರತೆಯ ಮಂತ್ರ ಜಪಿಸುತ್ತಿದ್ದಾರೆ. ಹಗರಣಗಳು ಬೇಡ; ಸಮಸ್ಯೆಗಳಿಗೆ ಪರಿಹಾರ ಬೇಕು. ರಾಷ್ಟ್ರವಾದದ ರಾಜನೀತಿಯನ್ನು ಜನತೆ ಬಯಸುತ್ತಿದ್ದಾರೆ. ಬಿಜೆಪಿಯ ರಾಷ್ಟ್ರನೀತಿಯೊಂದಿಗೆ ಜನತೆ ನಡೆಯುತ್ತಿದ್ದಾರೆ. ಕರ್ನಾಟಕವು ಬಿಜೆಪಿ ಆಡಳಿತ ಬಯಸುತ್ತಿದೆ ಎಂದು ಮೋದಿ ಹೇಳಿದರು.
ಪಶ್ಚಿಮ ಬಂಗಾಲದಲ್ಲಿ 10 ವರ್ಷದ ಹಿಂದೆ ಮೂವರು ಬಿಜೆಪಿ ಶಾಸಕರಿದ್ದುದು ಈಗ 200ಕ್ಕೂ ಹೆಚ್ಚಾಗಿದೆ. ಕೇರಳಂನಲ್ಲಿ ಮೂವರು ಬಿಜೆಪಿ ಶಾಸಕರಿದ್ದಾರೆ. ಮುಂದೆ ಬಿಜೆಪಿ- ಎನ್ಡಿಎ ಶಾಸಕರ ಸಂಖ್ಯೆ ಮುಂದೆ ಬಹುಮತದತ್ತ ಮುನ್ನಡೆಯಲಿದೆ ಎಂದು ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ವಿಕಾಸದ ಜೊತೆ ದೇಶದ ವಿಕಾಸವನ್ನು ನಾವು ಬಯಸುತ್ತೇವೆ. 40 ವರ್ಷದ ಹಿಂದೆ 400ಕ್ಕೂ ಹೆಚ್ಚು ಸಂಸದರಿದ್ದ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಾಣುತ್ತಿದೆ. ಆದರೂ, ಅವರ ಅಹಂಕಾರವು ಮಿತಿ ಮೀರಿದೆ. ಸಂವಿಧಾನ, ಪ್ರಜಾಪ್ರಭುತ್ವ, ಸಾಂವಿಧಾನಿಕ ಪ್ರಕ್ರಿಯೆಯನ್ನು ಕಡೆಗಣಿಸುತ್ತಾರೆ ಎಂದು ಪ್ರಧಾನಿ ಮೋದಿ ಟೀಕಿಸಿದರು.
ಎಲ್ಲರ ಜೊತೆ ಎಲ್ಲರ ವಿಕಾಸವೇ ನಮ್ಮ ಮಂತ್ರ ಎಂದ ಅವರು, ಇದೇ ಕಾರಣಕ್ಕೆ ನಮಗೆ 3ನೇ ಬಾರಿ ದೇಶದಲ್ಲಿ ಆಡಳಿತದ ಅವಕಾಶ ಸಿಕ್ಕಿದೆ. ಕಾಂಗ್ರೆಸ್ ಹಾಗಲ್ಲ, ಅವರು ಆಡಳಿತಕ್ಕೆ ಬಂದ ಕೆಲವೇ ಸಮಯದಲ್ಲಿ ವಿಶ್ವಾಸದ್ರೋಹದಿಂದ ಆಡಳಿತ ವಿರೋಧಿ ಅಲೆ ಆರಂಭವಾಗುತ್ತದೆ ಎಂದರು.
ಕರ್ನಾಟಕದಲ್ಲೂ ಆಡಳಿತ ವಿರೋಧಿ ಅಲೆಯನ್ನೇ ನೋಡುತ್ತಿದ್ದೇವೆ. ಪರಸ್ಪರ ಜಗಳದಲ್ಲಿ ಕರ್ನಾಟಕ ಕಾಂಗ್ರೆಸ್ ತೊಡಗಿಕೊಂಡಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಒಳಜಗಳ ನಡೆದಿದೆ. ತಮಿಳುನಾಡು, ಕೇರಳದಲ್ಲೂ ಆಡಳಿತದ ವಿಚಾರದಲ್ಲಿ ಸಮಸ್ಯೆ ಇದೆ ಎಂದ ಮೋದಿ, ಹಿಮಾಚಲ ಪ್ರದೇಶದಲ್ಲಿ ಸರಕಾರಿ ನೌಕರರರಿಗೆ ವೇತನ ಕೊಡಲೂ ಸಾಧ್ಯವಾಗುತ್ತಿಲ್ಲ. ತೆಲಂಗಾಣದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಖಜಾನೆ ಲೂಟಿ ಆಗುತ್ತಿದೆ. ಕಾಂಗ್ರೆಸ್ ಪ್ರಾದೇಶಿಕ ಪಕ್ಷವಾಗುತ್ತಿದೆ ಎಂದು ಹೇಳಿದರು.
ತಮಿಳುನಾಡಿನಲ್ಲಿ ಡಿಎಂಕೆ ಜೊತೆಗೆ ಇದ್ದ ಕಾಂಗ್ರೆಸ್ ಪಕ್ಷವು ಇದೀಗ ಆಡಳಿತದ ಲಾಲಸೆಯಿಂದ ಡಿಎಂಕೆಯ ಮೈತ್ರಿ ತೊರೆದು ಟಿವಿಕೆ ಜೊತೆಗೂಡಿದೆ ಎಂದು ಟೀಕಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷವು ಮಹಿಳಾ ಮೀಸಲಾತಿ ವಿಚಾರದಲ್ಲಿ ತಾಯಂದಿರು, ಸೋದರಿಯರಿಗೆ ವಿಶ್ವಾಸದ್ರೋಹ ಮಾಡಿದೆ ಎಂದು ದೂರಿದರು.
ಬಿಜೆಪಿಗೆ ದೇಶಹಿತವೇ ಸರ್ವಪ್ರಥಮ ಎಂದ ಅವರು, ಯುದ್ಧದಿಂದ ಭಾರತದ ಮೇಲೂ ಪರಿಣಾಮ ಆಗಿದೆ; ನಾವು ಸಂಯಮದಿಂದ ಕೆಲಸ ಮಾಡಬೇಕೆಂದು ಜನರಿಗೆ ಮನವಿ ಮಾಡಿದರು. ಕೋವಿಡ್ ಸಂದರ್ಭದಲ್ಲಿ ಸಂಯಮದಿಂದ ನಾವು ಇದ್ದೆವು. ಅದೇ ಮಾದರಿಯಲ್ಲಿ ನಾವು ಈ ಸಂಕಷ್ಟದಿಂದ ಹೊರಬರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭ ಪ್ರಧಾನಿಯನ್ನು ಮೈಸೂರಿನ ಶಾಲು ಹಾಕಿ, ಮೈಸೂರು ಪೇಟ ತೊಡಿಸಿ ಮೋದಿಯ ಪುತ್ಥಳಿ ನೀಡಿ ಗೌರವಿಸಲಾಯಿತು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಕರ್ನಾಟಕ ರಾಜ್ಯ ಉಸ್ತುವಾರಿ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ರಾಧಾಮೋಹನ್ ದಾಸ್ ಅಗ್ರವಾಲ್, ಮಾಜಿ ಮುಖ್ಯಮಂತ್ರಿ ಮತ್ತು ಸಂಸದರಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಪಿ.ಸಿ. ಮೋಹನ್, ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಉಪಸ್ಥಿತರಿದ್ದರು.






