ಜಿಎಸ್ ಟಿ ಕಡಿತ ವಿಚಾರದಲ್ಲಿ ಕಾಂಗ್ರೆಸ್ ದ್ವಿಮುಖ ನೀತಿ : ಬಸವರಾಜ ಬೊಮ್ಮಾಯಿ

ಬೆಂಗಳೂರು: ಜಿಎಸ್ ಟಿ ಕಡಿತ ವಿಚಾರದಲ್ಲಿ ಕಾಂಗ್ರೆಸ್ ದ್ವಿಮುಖ ನೀತಿ ಅನುಸರಿಸುತ್ತಿದ್ದು, ಈಗ ಅವರ ಬಣ್ಣ ಬಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಎಸ್‌ಟಿ ಕಡಿತದ ವಿಚಾರದಲ್ಲಿ ಕಾಂಗ್ರೆಸ್ ಡಬಲ್ ಪಾಲಿಸಿ ಅನುಸರಿಸುತ್ತಿದೆ. ಅವರು ಜನರ ಪರ ತೆರಿಗೆ ಕಡಿಮೆ ಆಗಬೇಕು ಅಂತಾರೆ. ಆದರೆ, ತಮ್ಮ ಪಾಲಿನ ತೆರಿಗೆ ಬಿಟ್ಡು ಕೊಡಲು ಸಿದ್ದರಿಲ್ಲ. ಸಿದ್ದರಾಮಯ್ಯ ಅವರು ರಾಜ್ಯದ ಜನರ ಮೇಲೆ ಒಂದು ಲಕ್ಷ ಕೋಟಿ ರೂ. ಗೂ ಹೆಚ್ಚಿಗೆ ತೆರಿಗೆ ಹಾಕಿದ್ದಾರೆ. ಇದರಿಂದ ರಾಜ್ಯದ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಾಮಾನ್ಯ ಜನರ ಅನುಕೂಲಕ್ಕೆ ಜಿಎಸ್ ಟಿ ಕಡಿತ ಮಾಡಿದೆ. ಇದರಿಂದ ಬಳಕೆ ಹೆಚ್ಚಾಗಿ ತೆರಿಗೆ ಸಂಗ್ರಹ ಹೆಚ್ಚಾಗುತ್ತದೆ. ತೆರಿಗೆ ಕಡಿತದ ಲಾಭ ಸಾಮಾನ್ಯ ಜನರಿಗೆ ತಲುಪುತ್ತದೆ. ಇದು ಸಾಮಾನ್ಯ ಜನರಿಗೆ ಗೊತ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಈ ಬಗ್ಗೆ ಪ್ರತಿ ದಿನ ಕೆಲಸ ಮಾಡುತ್ತಿದ್ದಾರೆ. ಜಿಎಸ್ ಟಿ ಕಡಿತ ದೇಶದ ಆರ್ಥಿಕ ದಿಕ್ಸೂಚಿಯನ್ನು ಬದಲಿಸುತ್ತದೆ. ಅಷ್ಟೇ ಅಲ್ಲದೇ ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಮುಂಚೆಯೇ ಭಾರತ ಜಗತ್ತಿನ ಮೂರನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ನಾಯಕರ ಮೆಚ್ಚಿಸಲು ಬ್ಯಾಲೆಟ್ :
ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸಲು ತೀರ್ಮಾನ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬ್ಯಾಲೆಟ್ ಪೇಪರ್ ಇದ್ದಾಗ ಸಾಕಷ್ಟು ಅಕ್ರಮಗಳು ಆಗಿವೆ. ರಾಜ್ಯ ಚುನಾವಣಾ ಆಯುಕ್ತರು ಹಿಂದೆ ಏನಾಗಿತ್ತು ಎನ್ನುವುದನ್ನು ತಿರುಗಿ ನೋಡಬೇಕು. ಸಿದ್ದರಾಮಯ್ಯ ಅವರು ಇವಿಎಂ ಮೂಲಕ ಆಯ್ಕೆಯಾಗಿ ಎರಡು ಬಾರಿ ಸಿಎಂ ಅಗಿದ್ದಾರೆ. ಈಗ ಬೆಂಗಳೂರಿನ ಜನರಿಗೆ ಬ್ಯಾಲೆಟ್ ಪೇಪರ್ ಬೇಕು ಅಂತ ಹೇಳುತ್ತಿದ್ದಾರೆ. ಜನರನ್ನು ಇಪ್ಪತೈದು ವರ್ಷಗಳ ಹಿಂದೆ ಕರೆದುಕೊಂಡು ಹೋಗುತ್ತಿದ್ದಾರೆ. ಇದು ಅವರ ನಾಯಕರನ್ನು ಮೆಚ್ಚಿಸಲು ಮಾಡಿರುವ ತೀರ್ಮಾನ ಎಂದು ಹೇಳಿದರು.
ಅಲ್ಪಸಂಖ್ಯಾತರಿಗೆ ಮೀಸಲಾತಿ ಇಲ್ಲ :
ಗುತ್ತಿಗೆಯಲ್ಲಿ ಅಲ್ಪ ಸಂಖ್ಯಾತರ ಹೆಸರಿನಲ್ಲಿ ಕೇವಲ ಮುಸ್ಲೀಮರಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಪಸಂಖ್ಯಾತರಿಗೆ ಸಂವಿಧಾನದಲ್ಲಿ ಮೀಸಲಾತಿಗೆ ಅವಕಾಶ ಇಲ್ಲ. ಇವರು ಅನುಕೂಲಕ್ಕೆ ತಕ್ಕಂತೆ ಸಂವಿಧಾನ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರು ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಮೀಸಲಾತಿ ಎಲ್ಲಿದೆ ಅಂತ ಹೇಳಲಿ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ಕಡಿಮೆಯಾಗಿವೆ ಎಂಬ ವರದಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ನಡೆಯುತ್ತಲೇ ಇವೆ. ಇವರು ರೈತರ ಆತ್ಮಹತ್ಯೆಯಾದಾಗ ಪ್ರಕರಣ ದಾಖಲಿಸುತ್ತಿಲ್ಲ. ಹೀಗಾಗಿ ರೈತರ ಆತ್ಮಹತ್ಯೆ ಕಡಿಮೆಯಾಗುತ್ತಿವೆ ಅಂತ ಹೇಳುತ್ತಾರೆ ಎಂದು ಹೇಳಿದರು.







