ಅಝೀಮ್ ಪ್ರೇಮ್‌ಜಿ ಫೌಂಡೇಶನ್ ಮೂಲಕ ಅಂಗಾಂಗ ಕಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ : ಡಾ.ಶರಣಪ್ರಕಾಶ್ ಪಾಟೀಲ್

ಬೆಂಗಳೂರು, ಜ.2: ಅಝೀಮ್ ಪ್ರೇಮ್ ಜಿ ಫೌಂಡೇಶನ್ ಮೂಲಕ ರಾಜೀವ್ ಗಾಂಧಿ ಹೃದ್ರೋಗಗಳ ಆಸ್ಪತ್ರೆ ಆವರಣದಲ್ಲಿ 10 ಎಕರೆ ಜಮೀನಿನಲ್ಲಿ ಎಲ್ಲ ಅಂಗಾಂಗ ಕಸಿಗಳನ್ನು ಒಳಗೊಂಡ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಟರ್ಷಿಯರಿ ಆರೈಕೆ ಆಸ್ಪತ್ರೆ ನಿರ್ಮಾಣ ಮಾಡುವ ಒಡಂಬಡಿಕೆಗೆ ಸಹಿ ಹಾಕಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಎಂಟ್ರಾಲಜಿ ಸೈನ್ಸಸ್ ಆಂಡ್ ಆರ್ಗನ್ ಟ್ರಾನ್ಸ್
ಪ್ಲಾಂಟ್(ಐಜಿಒಟಿ) ಸಂಸ್ಥೆಗೆ 2016ರಲ್ಲಿ ನಮ್ಮ ಸರಕಾರ ರಾಜೀವ್ ಗಾಂಧಿ ಹೃದ್ರೋಗಗಳ ಆಸ್ಪತ್ರೆ ಆವರಣದಲ್ಲಿ 10 ಎಕರೆ ಜಮೀನನ್ನು ಕಾಯ್ದಿರಿಸಿತ್ತು ಎಂದು ಹೇಳಿದರು.
ಅಲ್ಲಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಅಝೀಮ್ ಪ್ರೇಮ್ಜಿ ಫೌಂಡೇಶನ್ಗೆ 99 ವರ್ಷಗಳ ಅವಧಿಗೆ ಗುತ್ತಿಗೆ ನೀಡಿ, ಒಡಂಬಡಿಕೆಗೆ ಸಹಿ ಹಾಕಲು ನಿರ್ಧರಿಸಲಾಗಿದೆ. ಎಲ್ಲ ಅಂಗಾಂಗ ಕಸಿಯ ಸೌಲಭ್ಯ, ಎಲ್ಲ ರೀತಿಯ ಕ್ಯಾನ್ಸರ್ಗೆ ಚಿಕಿತ್ಸೆ ನೀಡಲು 1,000 ಕೋಟಿ ರೂ. ವೆಚ್ಚದಲ್ಲಿ ಅವರ ಸ್ವಂತ ಖರ್ಚಿನಲ್ಲಿ ಆಸ್ಪತ್ರೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಪ್ರತಿ ವರ್ಷ 350 ಕೋಟಿ ರೂ.ವೆಚ್ಚದಲ್ಲಿ ಆಸ್ಪತ್ರೆ ನಿರ್ವಹಣೆ ಮಾಡುತ್ತಾರೆ. ಅಲ್ಲದೇ, ಆಸ್ಪತ್ರೆಯನ್ನು ಅವರೇ ನಡೆಸುತ್ತಾರೆ. ಅಝೀಮ್ ಪ್ರೇಮ್ ಜೀ ಫೌಂಡಶನ್ ನಮ್ಮ ಪ್ರಸ್ತಾವ ಒಪ್ಪಿದ್ದಾರೆ. ಐದು ವರ್ಷದಲ್ಲಿ ಈ ಆಸ್ಪತ್ರೆ ಸ್ಥಾಪನೆಯಾಗಲಿದೆ. ಮೊದಲು ಮೂರು ವರ್ಷಗಳಲ್ಲಿ 300 ಹಾಸಿಗೆಗಳ ಆಸ್ಪತ್ರೆ ನಿರ್ಮಾಣವಾಗಲಿದೆ. ಅದರಲ್ಲಿ ಶೇ.70ರಷ್ಟು ಉಚಿತ ಹಾಸಿಗೆ ಹಾಗೂ ಶೇ.30ರಷ್ಟು ಸರಕಾರಿ ಆಸ್ಪತ್ರೆಗಳಲ್ಲಿ ಇರುವಂತೆ ಕನಿಷ್ಠ ದರ ಇರಲಿದೆ ಎಂದು ಡಾ.ಶರಣ ಪ್ರಕಾಶ್ ಪಾಟೀಲ್ ಹೇಳಿದರು.
ಆಸ್ಪತ್ರೆಗೆ ಸಂಬಂಧಿಸಿ ಅಝೀಮ್ ಪ್ರೇಮ್ ಜಿ ಅವರು ರಚಿಸಲಿರುವ ಆಡಳಿತ ಮಂಡಳಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವರು, ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಹಾಗೂ ಆರ್ಥಿಕ ಇಲಾಖೆಯ ಕಾರ್ಯದರ್ಶಿ ಸದಸ್ಯರಾಗಿರುತ್ತಾರೆ.
-ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ







