ಲಿಂಗಾಯತ-ವೀರಶೈವ ಕುರಿತ ವಿವಾದಿತ ಪುಸ್ತಕ ಬಿಡುಗಡೆ : ರವಿ ಹಂಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ವಿಜಯೇಂದ್ರ ಆಗ್ರಹ

ಬಿ.ವೈ.ವಿಜಯೇಂದ್ರ
ಬೆಂಗಳೂರು : ಲಿಂಗಾಯತ ಧರ್ಮ ಹಾಗೂ ವೀರಶೈವ ಸಮುದಾಯದ ನಡುವೆ ವಿವಾದ ಹುಟ್ಟಹಾಕಿರುವ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಜತೆಗೆ, ಕೃತಿಕಾರ ರವಿ ಹಂಜ್ ವಿರುದ್ಧ ಕಾನೂನು ರೀತ್ಯಾ ರಾಜ್ಯ ಸರಕಾರ ಕ್ರಮ ಕೈಗೊಳ್ಳುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ವೀರಶೈವ-ಲಿಂಗಾಯತ ಸತ್ಯದರ್ಶನ ಹೆಸರಿನಲ್ಲಿರುವ ‘ಬಸವ ಮಂಟಪ’ ಪುಸ್ತಕ ಕುರಿತು ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ನಡುವೆ ಗುರುವಾರ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಬಿ.ವೈ.ವಿಜಯೇಂದ್ರ, ಲಿಂಗಭೇದ, ವರ್ಣಭೇದ ಹಾಗೂ ವರ್ಗಭೇದ ರಹಿತವಾದ ಸಮಾಜ ನಿರ್ಮಾಣದ ಬೋಧನೆ ಮಾಡಿದ ಜಗಜ್ಯೋತಿ ಬಸವಣ್ಣನವರು ವೀರಶೈವ ಲಿಂಗಾಯತ ಸಮುದಾಯದ ಅಸ್ಮಿತೆಯಾಗಿದ್ದಾರೆ. ವಿಶ್ವ ಕಂಡ ಶ್ರೇಷ್ಠ ದಾರ್ಶನಿಕ ಬಸವಣ್ಣನವರ ಚಿಂತನೆಗಳು ಮತ್ತು ಅವರ ಬದುಕಿನ ಸಂದೇಶಗಳು ಕಾಲಾತೀತವಾದುದು. ಬಸವಣ್ಣನವರ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಹೇಳಿಕೆ ಅಥವಾ ಕೃತಿಗಳನ್ನು ವೀರಶೈವ ಲಿಂಗಾಯತ ಸಮುದಾಯ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ಸದ್ಯ ಚರ್ಚೆ ಆಗುತ್ತಿರುವ ವಿವಿಧಾತ್ಮಕ ಕೃತಿಯಲ್ಲಿ ಕೃತಿಕಾರ ರವಿ ಹಂಜ್, ಬಸವಣ್ಣನವರ ಗೌರವಕ್ಕೆ ಮತ್ತು ಚಿಂತನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ವಿಷಯಗಳನ್ನು ಮಂಡಿಸಿರುವ ಆರೋಪ ಕೇಳಿ ಬಂದಿದೆ. ರಾಜ್ಯ ಸರಕಾರ ಕೂಡಲೇ ವಿವಾದಾತ್ಮಕ ಕೃತಿ ಕುರಿತಂತೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು. ಜಗತ್ತಿಗೆ ಧರ್ಮದ ಮೂಲಕ ಶಾಂತಿಯನ್ನು ಸಾರಿದ ಬಸವಣ್ಣನವರ ಸಾರ್ವಕಾಲಿಕ ಚಿಂತನೆಗಳು ಮುಂದಿನ ಜನಾಂಗಕ್ಕೂ ದಾರಿ ದೀಪ ಆಗಿವೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಸರಕಾರ ಬಸವಣ್ಣನವರನ್ನು ಕೇವಲ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದರೆ ಸಾಲದು. ಬಸವಣ್ಣನವರ ಚಿಂತನೆ ಮತ್ತು ಸಿದ್ಧಾಂತಗಳಿಗೆ ಪೂರಕವಾಗಿಯೂ ನಡೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ರಾಜ್ಯ ಸರಕಾರ ತಕ್ಷಣವೇ ಈ ಬಗ್ಗೆ ತನ್ನ ನಿಲುವನ್ನು ಪ್ರಕಟಿಸಬೇಕು. ವಿವಾದಾತ್ಮಕ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದೂ ವಿಜಯೇಂದ್ರ ಒತ್ತಾಯಿಸಿದ್ದಾರೆ.






