ಪ್ರತಿಯೊಬ್ಬ ವ್ಯಕ್ತಿಯು ತನ್ನ ಸ್ವಂತ ಮನಸ್ಸಿನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರಬೇಕು : ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್

ಬೆಂಗಳೂರು : ಮಾದಕ ದ್ರವ್ಯ ವ್ಯಸನ ವಿರುದ್ಧದ ಹೋರಾಟವು ಪ್ರತಿಯೊಬ್ಬ ವ್ಯಕ್ತಿಯಿಂದ ಪ್ರಾರಂಭವಾಗಿ ರಾಷ್ಟ್ರವ್ಯಾಪಿ ಆಂದೋಲನವಾಗಿ ಬೆಳೆಯಬೇಕು ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಕರೆ ನೀಡಿದ್ದಾರೆ.
ರವಿವಾರ ಇಲ್ಲಿನ ಕಂಠೀರವ ಕ್ರೀಡಾಂಣದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಆಯೋಜಿಸಿದ್ದ ‘ವಿವಿಯ 31ನೇ ಸಂಸ್ಥಾಪನಾ ದಿನಾಚರಣೆ, ನಶಾ ಮುಕ್ತ ಭಾರತ ಅಭಿಯಾನ ಹಾಗೂ ಅಂತರರಾಷ್ಟ್ರೀಯ ಮಾದಕ ವಸ್ತು ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.
ಮಾದಕ ದ್ರವ್ಯ ವ್ಯಸನವು ಕೇವಲ ವ್ಯಕ್ತಿಯ ಆರೋಗ್ಯಕ್ಕೆ ಮಾತ್ರವಲ್ಲದೆ, ಶೈಕ್ಷಣಿಕ ಸಾಧನೆ, ಉತ್ಪಾದಕತೆ, ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯ ಅಭಿವೃದ್ಧಿಗೂ ಬೆದರಿಕೆಯೊಡ್ಡುತ್ತದೆ. ‘ನಶಾ ಮುಕ್ತ ಭಾರತ’ ಎಂದರೆ ಕೇವಲ ಮಾದಕ ದ್ರವ್ಯಗಳಿಲ್ಲದಿರುವುದು ಮಾತ್ರವಲ್ಲ, ಬದಲಾಗಿ ಆರೋಗ್ಯಕರ ಆಯ್ಕೆಗಳು ಮತ್ತು ಸದೃಢ ಸಮುದಾಯಗಳನ್ನು ಉತ್ತೇಜಿಸುವುದಾಗಿದೆ ಎಂದು ಅವರು ಹೇಳಿದರು.
ಪ್ರತಿಯೊಬ್ಬ ವ್ಯಕ್ತಿಯು ತನ್ನ ಸ್ವಂತ ಮನಸ್ಸಿನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರಬೇಕು. ಮಾದಕ ದ್ರವ್ಯಗಳು ಮನಸ್ಸನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಾಗ, ವ್ಯಕ್ತಿಯು ತನ್ನ ಸ್ವಂತ ಜೀವನದ ಮೇಲಿನ ನಿಯಂತ್ರಣವನ್ನೇ ಕಳೆದುಕೊಳ್ಳುತ್ತಾನೆ. ವ್ಯಸನಕ್ಕೆ ಬಲಿಯಾಗುವ ಪ್ರತಿ ಯುವ ಜೀವವೂ ರಾಷ್ಟ್ರದ ಸಾಮಥ್ರ್ಯದ ನಷ್ಟವನ್ನು ಪ್ರತಿನಿಧಿಸುತ್ತದೆ ಎಂದು ಅವರು ಹೇಳಿದರು.
ವ್ಯಸನ ಮುಕ್ತಿ ವೈದ್ಯಕೀಯ ವಲಯ, ಮಾನಸಿಕ ಆರೋಗ್ಯ, ನಡವಳಿಕೆ ವಿಜ್ಞಾನಗಳು ಮತ್ತು ಸಮುದಾಯ ಆಧಾರಿತ ಮಧ್ಯಸ್ಥಿಕೆಗಳ ಕುರಿತು ಹೆಚ್ಚಿನ ಸಂಶೋಧನೆ ನಡೆಯಬೇಕಿದೆ. ಸಂಶೋಧನೆಯು ನೀತಿ-ನಿರೂಪಣೆಗೆ ಆಧಾರವಾಗಬೇಕು. ಮಾದಕವಸ್ತು ಬಳಕೆಯ ಅಸ್ವಸ್ಥತೆಗಳನ್ನು ನಿವಾರಿಸುವಲ್ಲಿ ತಂತ್ರಜ್ಞಾನ, ಕೌನ್ಸೆಲಿಂಗ್ ಸೇವೆಗಳು ಮತ್ತು ಸಮಾನ ಮನಸ್ಕರ ಬೆಂಬಲ ಜಾಲಗಳು (ಪೀರ್ ಸಪೋರ್ಟ್ ನೆಟ್‍ವರ್ಕ್) ನೆರವಾಗಬೇಕು ಎಂದು ಅವರು ತಿಳಿಸಿದರು.
ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಮಾನತಾಡಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು ದೇಶದ ಪ್ರಮುಖ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ತನ್ನ ಅಂಗಸಂಸ್ಥೆ ಸಂಸ್ಥೆಗಳೊಂದಿಗೆ ಸೇರಿ, ಸಮಾಜಕ್ಕೆ ಸೇವೆ ಸಲ್ಲಿಸುವಂತಹ ವೈದ್ಯರು, ದಾದಿಯರು, ಔಷಧಿಕಾರರು, ದಂತವೈದ್ಯರು, ಆಯುಷ್ ವೈದ್ಯರು, ಭೌತಚಿಕಿತ್ಸಕರು ಮತ್ತು ಸಂಬಂಧಿತ ಆರೋಗ್ಯ ವೃತ್ತಿಪರರನ್ನು ಸಮಾಜಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುತ್ತಾ ಬಂದಿದೆ ಎಂದರು.
ಆಂಧ್ರಪ್ರದೇಶದ ರಾಜ್ಯಪಾಲ ಜಸ್ಟೀಸ್ ಎಸ್. ಅಬ್ದುಲ್ ನಝೀರ್ ಮಾತನಾಡಿ, ಸಮಾಜದ ಒಂದು ದೊಡ್ಡ ವರ್ಗವು ಆರೋಗ್ಯ ರಕ್ಷಣಾ ಸೇವೆಗಳಿಂದ ವಂಚಿತರಾಗಿದ್ದಲ್ಲಿ, ಆ ಸಮಾಜವು ಪ್ರಬುದ್ಧ ಅಥವಾ ಸಮೃದ್ಧ ಸಮಾಜವೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ‘ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ'ದ ಭಾಗವಾಗಿ ಶಿಶುಗಳಿಗೆ ಪೋಲಿಯೋ ಲಸಿಕೆ ಹನಿಗಳನ್ನು ಹಾಕಿದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸುಮಾರು 25 ಸಾವಿರಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ‘ನಶಾ ಮುಕ್ತ ಭಾರತ’ ನಿರ್ಮಾಣ ಮಾಡಲು ರಾಯಭಾರಿಗಳಾಗಿ ಕಾರ್ಯನಿರ್ವಹಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಭಗವಾನ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.






