ಶಿಕ್ಷಣ ತಜ್ಞರು, ಪರಿಣಿತರ ಸಂಪರ್ಕಿಯೇ ಎಸ್ಇಪಿಗೆ ಪಠ್ಯಕ್ರಮ ರಚನೆ : ಸುಖದೇವ್ ಥೋರಟ್
ಸಾಂದರ್ಭಿಕ ಚಿತ್ರ
ಬೆಂಗಳೂರು: ಕರ್ನಾಟಕ ರಾಜ್ಯ ಶಿಕ್ಷಣ ನೀತಿಯು(ಎಸ್ಇಪಿ) ಯಾರ ಪರವೂ ಅಲ್ಲ, ವಿರುದ್ದವೂ ಆಗಿರುವುದಿಲ್ಲ. ವೈಜ್ಞಾನಿಕ ತಳಹದಿಯ ಮೇಲೆ ನುರಿತ ಶಿಕ್ಷಣ ತಜ್ಞರು, ಪರಿಣಿತರ ಸಂಪರ್ಕಿಸಿ ಎಸ್ಇಪಿಗೆ ಪಠ್ಯಕ್ರಮ ರಚನೆ ಮಾಡಲಾಗುತ್ತದೆ ಎಂದು ರಾಜ್ಯ ಶಿಕ್ಷಣ ನೀತಿ ಆಯೋಗದ ಅಧ್ಯಕ್ಷ ಸುಖದೇವ್ ಥೋರಟ್ ತಿಳಿಸಿದ್ದಾರೆ.
ಶುಕ್ರವಾರ ಇಲ್ಲಿನ ಬೆಂಗಳೂರು ವಿಶ್ವವಿದ್ಯಾಲಯದ ಎಚ್.ಎನ್.ಸಭಾಂಗಣದಲ್ಲಿ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಹಾಗೂ ರಾಜ್ಯ ಸರಕಾರದ ರಾಜ್ಯ ಶಿಕ್ಷಣ ನೀತಿ ಆಯೋಗ ಸಹಯೋಗದಲ್ಲಿ ನಡೆದ ‘ಪ್ರಾದೇಶಿಕ ಮಟ್ಟದ ಪಠ್ಯಕ್ರಮ ರಚನೆ’ ಕುರಿತ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಈ ಕಾರ್ಯಗಾರದ ಮುಖ್ಯ ಉದ್ದೇಶ ಪಠ್ಯಕ್ರಮದ ರಚನೆಯಲ್ಲಿ ಪ್ರಾಂಶುಪಾಲರು, ಡೀನ್ ರನ್ನು ಒಳಗೊಳ್ಳುವುದಾಗಿದೆ. ಪಠ್ಯ ರಚನೆಯಲ್ಲಿ ಪ್ರಾಧ್ಯಾಪಕರ ಪಾತ್ರವನ್ನು ಅವರಿಗೆ ತಿಳಿಸುವುದಾಗಿದೆ. ಪಠ್ಯಕ್ರಮ ರಚನೆಯ ಕೊನೆ ಕಾರ್ಯಗಾರ ಇದಾಗಿದ್ದು, ಪ್ರಾಧ್ಯಾಪಕರು, ಶಿಕ್ಷಣ ತಜ್ಞರ ಸಲಹೆ, ಅಭಿಪ್ರಾಯ ಆಧರಿಸಿ ಅಂತಿಮ ವರದಿ ಸಿದ್ದಪಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ರಾಜ್ಯ ಶಿಕ್ಷಣ ನೀತಿ ಆಯೋಗ ಸದಸ್ಯ ಕಾರ್ಯದರ್ಶಿ ಡಾ.ಭಾಗ್ಯವನ್ ಮಾತನಾಡಿ, ರಾಜ್ಯ ಶಿಕ್ಷಣ ನೀತಿ ಆಯೋಗವು ಈ ಹಿಂದಿನ ಎಲ್ಲ ಶಿಕ್ಷಣ ಆಯೋಗಗಳ ಶಿಫಾರಸ್ಸುಗಳನ್ನು ಒಳಗೊಂಡಂತೆ ರಾಜ್ಯದ ಸಾಂಸ್ಕೃತಿಕ, ಭೌಗೋಳಿಕ, ಐತಿಹಾಸಿಕ ಅಂಶಗಳನ್ನು ಒಳಗೊಂಡ ನಮ್ಮದೇ ಆದ ಶಿಕ್ಷಣ ನೀತಿ ರಚಿಸುವ ಉದ್ದೇಶ ಹೊಂದಿದೆ ಎಂದರು.
ಬೆಂಗಳೂರು ವಿವಿಯ ಕುಲಪತಿ ಡಾ.ಜಯಕರ ಎಸ್.ಎಂ. ಮಾತನಾಡಿ, ಎಸ್ಇಪಿ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಸ್ತುತ ಮತ್ತು ದೀರ್ಘಾವಧಿಯ ಸವಾಲುಗಳನ್ನು ಪರಿಹರಿಸುವ ಉದ್ದೇಶಗಳನ್ನು ಹೊಂದಿದೆ. ಥೋರಟ್ ನೇತೃತ್ವದಲ್ಲಿ ರಚನೆಯಾಗಿರುವ ಸಮಿತಿಯು 9 ಪ್ರಮುಖ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಪಠ್ಯಕ್ರಮ ರಚನೆಗೆ ಮುಂದಾಗಿದೆ. ಸಮಿತಿಯು ರಾಜ್ಯಾದ್ಯಂತ ಶಿಕ್ಷಣ ತಜ್ಞರು, ವಿಷಯ ತಜ್ಞರು, ನಿವೃತ್ತ ಕುಲಪತಿಗಳು, ವಿದ್ಯಾರ್ಥಿ ಸಂಘಟನೆ, ಸಮಾಜದ ಪ್ರಮುಖರ ಅಭಿಪ್ರಾಯಗಳನ್ನು ಸಂಗ್ರಹಿಸಿ ಶಿಕ್ಷಣ ನೀತಿ ರೂಪಿಸುತ್ತಿದೆ ಎಂದರು.
ಕಾರ್ಯಗಾರದಲ್ಲಿ ಬೆಂಗಳೂರು ವಲಯಕ್ಕೆ ಒಳಪಡುವ ಬೆಂಗಳೂರು ವಿವಿ, ಬೆಂಗಳೂರು ಕೇಂದ್ರ ವಿವಿ, ದಾವಣಗೆರೆ ವಿವಿ,ತುಮಕೂರು ವಿವಿ, ಸಂಸ್ಕೃತ ವಿವಿ, ಬೆಂಗಳೂರು ಉತ್ತರ ವಿವಿ, ಮಹಾರಾಣಿ ಕ್ಲಸ್ಟರ್ ವಿವಿ, ನೃಪತುಂಗ ವಿವಿ, ಯುವಿಸಿಇ ವಿವಿ, ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ವಿವಿ ಸೇರಿದಂತೆ ಒಟ್ಟು 9 ವಿಶ್ವವಿದ್ಯಾಲಯಗಳ ಡೀನರು, ಪ್ರಾಂಶುಪಾಲರು, ಪ್ರಾಧ್ಯಾಪಕರು ಪಾಲ್ಗೊಂಡಿದ್ದರು. ಪ್ರೊ.ಸುಧಾಂಶು ಭೂಷಣ್, ಪ್ರೊ.ರಾಜೇಂದ್ರ ಚೆನ್ನಿ, ಕುಲಸಚಿವ ಶೇಕ್ ಲತೀಫ್ ಕೆ.ಎ.ಎಸ್, ಡಾ.ಮೊಹಮ್ಮದ್ ಫರೂಕ್ ಪಾಷಾ ಉಪಸ್ಥಿತರಿದ್ದರು.
ರಾಜ್ಯದಲ್ಲಿ ಸಮಾನ ಮತ್ತು ಸಂವಿಧಾನ ಆಧರಿತ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ಉದ್ದೇಶವನ್ನು ಎಸ್ಇಪಿ ಹೊಂದಿದೆ. ಎಸ್ಇಪಿ ಪಠ್ಯಕ್ರಮದಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಭಿವೃದ್ಧಿ ಜೊತೆಗೆ ಸಮಾಜದೆಡೆಗೆ ವಿಶಾಲ ಮನೋಭಾವ, ಸಮಾನ ದೃಷ್ಟಿಕೋನ ಕೂಡ ಬೆಳೆಯಲಿದೆ. ವಿದ್ಯಾರ್ಥಿಗಳ ಕೌಶಲ್ಯ ಹೆಚ್ಚಿಸುವ ಗುರಿ ಹೊಂದಿರುವುದರಿಂದ ವಿದ್ಯಾರ್ಥಿಗಳಿಗೆ ಉದ್ಯೋಗವಾಕಾಶಗಳು ಹೆಚ್ಚಾಗಲಿದೆ.
-ಡಾ. ಜಯಕರ ಎಸ್. ಎಂ., ಬೆಂಗಳೂರು ವಿವಿಯ ಕುಲಪತಿ
ಚರ್ಚಿಸಲಾದ ವಿಷಯಗಳು:
-ಪಠ್ಯಕ್ರಮದ ರಚನೆ
-ಗುಣಮಟ್ಟ ಹೆಚ್ಚಿಸುವ ಕ್ರಮ
-ಮೌಲ್ಯಾಧಾರಿತ ಶಿಕ್ಷಣ ವ್ಯವಸ್ಥೆ
-ಕೌಶಲ್ಯ ಅಭಿವೃದ್ಧಿ
-ವಿಷಯ ತಜ್ಞ,ಶಿಕ್ಷಣ ತಜ್ಞ,ಪರಿಣಿತರ ಪಾಲ್ಗೊಳ್ಳುವಿಕೆ
-ವೃತ್ತಿ ಆಧಾರಿತ ಶಿಕ್ಷಣ
-ಸಂಶೋಧನೆ ಮತ್ತು ನಾವೀನ್ಯತೆಗೆ ಒತ್ತು
-ಭಾಷಾ ನೀತಿ
-ಮೌಲ್ಯಮಾಪನ ಸುಧಾರಣೆಗಳು