ಬೆಂಗಳೂರು | ಬ್ಯಾಂಕ್ ಖಾತೆಗಳ ದಾಖಲಾತಿಯನ್ನು ಸೈಬರ್ ವಂಚಕರಿಗೆ ಮಾರಾಟ ಮಾಡುತ್ತಿದ್ದ ಜಾಲ ಪತ್ತೆ : 12 ಮಂದಿ ಬಂಧನ

ಸಾಂದರ್ಭಿಕ ಚಿತ್ರ | PC : freepik.com
ಬೆಂಗಳೂರು : ಹಣದಾಸೆಗಾಗಿ ಅಮಾಯಕರ ಬ್ಯಾಂಕ್ ಖಾತೆಗಳ ದಾಖಲಾತಿಗಳನ್ನು ಸೈಬರ್ ವಂಚಕರಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದ ಜಾಲವನ್ನು ಬೇಧಿಸಿರುವ ಇಲ್ಲಿನ ಆಡುಗೋಡಿ ಠಾಣೆ ಪೊಲೀಸರು, 12 ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ವಂಚನೆಗೊಳಗಾದ ಸುಮಿಯಾ ಬಾನು ಎಂಬುವರು ನೀಡಿದ ದೂರಿನನ್ವಯ ಹರ್ಷವರ್ಧನ್, ಸೋನು, ರಾಜಮಿಶ್ರಾ ಹಾಗೂ ಶೈಲೇಶ್ ಗೌತಮ್ ಸೇರಿದಂತೆ 12 ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 400 ಸಿಮ್ ಕಾರ್ಡ್ಗಳು, 140 ಎಟಿಎಂ ಕಾರ್ಡ್ಗಳು, 17 ಚೆಕ್ಪುಸ್ತಕ, 27 ಮೊಬೈಲ್ ಫೋನ್, 22 ವಿವಿಧ ಬ್ಯಾಂಕ್ ಪಾಸ್ಬುಕ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಒಂದು ಬ್ಯಾಂಕ್ ಖಾತೆಗೆ 20 ಸಾವಿರ ಕಮಿಷನ್ ಪಡೆದು ಸಾರ್ವಜನಿಕರಿಂದ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ ಸೈಬರ್ ವಂಚಕರಿಗೆ ಮಾರಾಟ ಮಾಡುತ್ತಿದ್ದರು. ಈ ಪ್ರಕರಣದ ಸಂಬಂಧ ತನಿಖೆಯಲ್ಲಿ ಕೆಲವರು ತಪ್ಪೊಪ್ಪಿಕೊಂಡಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಆಡುಗೋಡಿ ಠಾಣಾ ಪೊಲೀಸರು ತಿಳಿಸಿದ್ದಾರೆ.