ಬೆಂಗಳೂರಿನಲ್ಲಿ ಫೆ.8ಕ್ಕೆ ಸೈಕ್ಲೊಥಾನ್: ನೋಂದಣಿ ಆರಂಭ

ಬೆಂಗಳೂರು, ನ.27: ಎಚ್‌ಸಿಎಲ್ ಗ್ರೂಪ್ ಹಾಗೂ ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಸಹಯೋಗದಿಂದ ಬೆಂಗಳೂರಿನ ನೈಸ್ ರಸ್ತೆಯಲ್ಲಿ 2026ರ ಫೆ.8ರಂದು ಎಚ್‌ಸಿಎಲ್ ಸೈಕ್ಲೊಥಾನ್‌ನ ಮೊದಲ ಆವೃತ್ತಿ ನಡೆಯಲಿದೆ.
ಈ ಬಗ್ಗೆ ನಗರದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಎಚ್‌ಸಿಎಲ್ ಗ್ರೂಪ್‌ನ ಸಹ ಉಪಾಧ್ಯಕ್ಷ ರಜತ್ ಚಾಂದೋಲಿಯಾ, ಇದು ಭಾರತದ ಅತಿ ದೊಡ್ಡ ಮತ್ತು ಅತ್ಯಂತ ಪ್ರತಿಷ್ಠಿತ ರಸ್ತೆ ಸೈಕ್ಲಿಂಗ್ ಪಂದ್ಯಾವಳಿಗಳಲ್ಲಿ ಒಂದಾಗಿದೆ. ನೋಯ್ಡಾ, ಚೆನ್ನೈ ಮತ್ತು ಹೈದರಾಬಾದ್ ನಗರಗಳಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿರುವ ಎಚ್‌ಸಿಎಲ್ ಸೈಕ್ಲೊಥಾನ್ ಈಗ ಭಾರತದ ಸೈಕ್ಲಿಂಗ್ ರಾಜಧಾನಿಯಾಗಿರುವ ಬೆಂಗಳೂರಿನಲ್ಲಿ ಫೆ.8 ರಂದು ಜರುಗುತ್ತಿದೆ. ಈ ಸ್ಪರ್ಧೆಯು ಒಟ್ಟು 30 ಲಕ್ಷ ಮೊತ್ತದ ಬಹುಮಾನಗಳನ್ನು ಒಳಗೊಂಡಿದೆ ಎಂದರು.
ವೃತ್ತಿಪರ, ಹವ್ಯಾಸಿ ಮತ್ತು ಜನಪ್ರಿಯ ಗ್ರೀನ್ ರೈಡ್ ಎಂಬ ಮೂರು ವರ್ಗಗಳ ರೈಡರ್‌ಗಳಿಗೆ ಈ ಎಚ್‌ಸಿಎಲ್ ಸೈಕ್ಲೊಥಾನ್ ಆತಿಥ್ಯ ನೀಡಲಿದೆ, ಇದೇ ಮೊದಲ ಬಾರಿಗೆ ವೃತ್ತಿಪರರು ಮತ್ತು ಹವ್ಯಾಸಿ ಸೈಕ್ಲಿಸ್ಟ್ ಗಳು ಏಕ ರೀತಿಯಲ್ಲಿ ಪಾಲ್ಗೊಳ್ಳವಂತೆ ಮಾಡುತ್ತಿದೆ. ನೋಂದಣಿಯು ಈಗ www.hclcyclothon.comದಲ್ಲಿ ತೆರೆದಿದೆ ಹಾಗೂ ಜ.26, 2026ರವರೆಗೂ ನೋಂದಣಿಗೆ ಅವಕಾಶವಿರುತ್ತದೆ ಎಂದು ಅವರು ತಿಳಿಸಿದರು.
ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಮಣಿಂದರ್ ಸಿಂಗ್ ಮಾತನಾಡಿ, ಬೆಂಗಳೂರಿನಲ್ಲಿ ಎಚ್‌ಸಿಎಲ್ ಸೈಕ್ಲೊಥಾನ್ ಅನ್ನು ಪರಿಚಯಿಸುತ್ತಿರುವುದು, ಭಾರತದಲ್ಲಿ ಸೈಕ್ಲಿಂಗ್ ಗಣನೀಯವಾಗಿ ಹೆಚ್ಚುತ್ತಿರುವುದನ್ನು ಎತ್ತಿ ತೋರಿಸುತ್ತದೆ. ಇಂತಹ ಕಾರ್ಯಕ್ರಮಗಳು ಅವಕಾಶಗಳನ್ನು ಸೃಷ್ಟಿಸುತ್ತವೆ, ಪ್ರತಿಭೆಗಳನ್ನು ಬೆಳೆಸುತ್ತವೆ, ಜಾಗತಿಕ ಸೈಕ್ಲಿಂಗ್‌ನಲ್ಲಿ ಭಾರತವು ತನ್ನ ಛಾಪನ್ನು ಬಲವಾಗಿ ಮೂಡಿಸಲು ಅವಕಾಶ ಕಲ್ಪಿಸುತ್ತದೆ ಎಂದರು.







