Davangere | ಸಹಪಾಠಿಗಳ ಎದುರು ವಾರ್ಡನ್ ಬಟ್ಟೆ ಬಿಚ್ಚಿಸಿದ ಆರೋಪ; ಮನನೊಂದು ನಾಪತ್ತೆಯಾಗಿದ್ದ ವಿದ್ಯಾರ್ಥಿಯ ರಕ್ಷಣೆ

ಸಾಂದರ್ಭಿಕ ಚಿತ್ರ
ದಾವಣಗೆರೆ : ಶಾಲಾ ಪ್ರಾರ್ಥನೆ ವೇಳೆ ಬೇರೊಬ್ಬ ವಿದ್ಯಾರ್ಥಿಯ ಬಟ್ಟೆ ಧರಿಸಿ ಬಂದಿದ್ದಾನೆ ಎಂದು ಆರೋಪಿಸಿ ವಾರ್ಡನ್ ಬಟ್ಟೆ ಬಿಚ್ಚಿಸಿದ ಪರಿಣಾಮ ರಾತ್ರೋರಾತ್ರಿ ವಸತಿ ಶಾಲೆಯಿಂದ ನಾಪತ್ತೆಯಾಗಿದ್ದ ನೊಂದ ಎಸೆಸೆಲ್ಸಿ ವಿದ್ಯಾರ್ಥಿಯನ್ನು 24 ಗಂಟೆಯೊಳಗೆ ಸುರಕ್ಷಿತವಾಗಿ ಪತ್ತೆ ಹಚ್ಚಲಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದೇವರಹೊಸಹಳ್ಳಿ ಗ್ರಾಮದ ಬಾಲಕ ಮೂರು ವರ್ಷಗಳಿಂದ ದಾವಣಗೆರೆ ನಗರದ ಖಾಸಗಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.
ಶಾಲಾ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಬಾಲಕ ಬೇರೊಬ್ಬ ವಿದ್ಯಾರ್ಥಿಯ ಪ್ಯಾಂಟ್ ಧರಿಸಿದ್ದಾನೆ ಎಂದು ವಾರ್ಡನ್ ಪ್ರಶ್ನಿಸಿದ್ದಾರೆ. ಬಳಿಕ ಸತ್ಯ ಹೇಳುವಂತೆ ಒತ್ತಾಯಿಸಿ, ವಿದ್ಯಾರ್ಥಿಯ ಬಟ್ಟೆ ಬಿಚ್ಚುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಸಹಪಾಠಿಗಳ ಎದುರೇ ಬಟ್ಟೆ ಬಿಚ್ಚಿಸಿದ ಘಟನೆ ವಿದ್ಯಾರ್ಥಿಗೆ ತೀವ್ರ ನೋವುಂಟು ಮಾಡಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಘಟನೆಯ ಬಳಿಕ ಮಾನಸಿಕವಾಗಿ ನೊಂದಿದ್ದ ಬಾಲಕ ರಾತ್ರಿ ಸುಮಾರು 8:30ರ ವೇಳೆಗೆ ಹಾಸ್ಟೆಲ್ನಿಂದ ಹೊರಗೆ ಹೋಗಿದ್ದಾನೆ. ರಾತ್ರಿ 10ರ ಸುಮಾರಿಗೆ ಈ ವಿಷಯವನ್ನು ವಾರ್ಡನ್ ವಿದ್ಯಾರ್ಥಿಯ ಪೋಷಕರಿಗೆ ತಿಳಿಸಿದ್ದಾರೆ.
ತಕ್ಷಣ ಪೋಷಕರು ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದ್ದಾರೆ. ಬಳಿಕ ಮಗನನ್ನು ಹುಡುಕಿಕೊಡುವಂತೆ ವಿದ್ಯಾನಗರ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದರು.
ಮಗ ನಾಪತ್ತೆಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ತಾಯಿ, ಚಿಕ್ಕಮ್ಮ ಹಾಗೂ ಚಿಕ್ಕಪ್ಪ ಸೇರಿದಂತೆ ಕುಟುಂಬಸ್ಥರು ದಾವಣಗೆರೆಗೆ ಆಗಮಿಸಿ ಶಾಲಾ ಆಡಳಿತ ಮಂಡಳಿ ಹಾಗೂ ವಾರ್ಡನ್ ಅವರನ್ನು ಪ್ರಶ್ನಿಸಿದ್ದಾರೆ. ಶಾಲೆಯ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರು ಪೋಷಕರಿಗೆ ಧೈರ್ಯ ಹೇಳಿ, ಬಾಲಕ ದಾವಣಗೆರೆಯ ಮೆಕ್ಡೊನಾಲ್ಡ್ ಸಮೀಪ ಟೀ ಕುಡಿದು ಹೋಗಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡು ಬಂದಿದೆ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಯ ಬಟ್ಟೆ ಬಿಚ್ಚಿಸಿದ ಘಟನೆ ಕುರಿತು ಆಂತರಿಕವಾಗಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ.
ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿ ಪತ್ತೆ:
ಇದರ ನಡುವೆ ಬಾಲಕ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚೇನಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿರುವ ಮಾಹಿತಿ ಕುಟುಂಬಸ್ಥರಿಗೆ ಲಭಿಸಿದೆ. ಅಲ್ಲಿದ್ದ ಪ್ರಯಾಣಿಕರೊಬ್ಬರು ಬಾಲಕನನ್ನು ಗುರುತಿಸಿ, ಆತನ ತಂದೆ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.






