ಬೆಂಗಳೂರು | ಬ್ರೆಝಿಲ್ ಮೂಲದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ; ಡೆಲಿವರಿ ಬಾಯ್ ಬಂಧನ

ಬಂಧಿತ ಆರೋಪಿ
ಬೆಂಗಳೂರು : ಆನ್ಲೈನ್ ಮೂಲಕ ದಿನಸಿ ವಸ್ತುಗಳನ್ನು ಆರ್ಡರ್ ಮಾಡಿದ್ದ ಬ್ರೆಝಿಲ್ ಮೂಲದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಡೆಲಿವರಿ ಬಾಯ್ಯೊಬ್ಬನನ್ನು ಆರ್.ಟಿ. ನಗರ ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತೆ ಕೆಲಸ ಮಾಡುತ್ತಿದ್ದ ಕಂಪೆನಿಯ ಸಹದ್ಯೋಗಿ ಕಾರ್ತಿಕ್ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಕುಮಾರ್ (22) ಎಂಬಾತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಅ.17ರಂದು ಸಂತ್ರಸ್ತೆ ತಮ್ಮ ಮೊಬೈಲ್ನಲ್ಲಿ ಆ್ಯಪ್ವೊಂದರ ಮುಖಾಂತರ ಆಹಾರ ಪದಾರ್ಥ ಆರ್ಡರ್ ಮಾಡಿದ್ದರು. ಅದೇ ದಿನ ಸಂಜೆ ಬುಕ್ ಮಾಡಲಾಗಿದ್ದ ದಿನಸಿ ವಸ್ತುವನ್ನು ತಂದ ಆರೋಪಿ ಡೆಲಿವರಿಗಾಗಿ ಮನೆಯ ಬಾಗಿಲಿಗೆ ಬಂದಿದ್ದ. ಡೆಲಿವರಿ ನೀಡುವಾಗ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ದೇಹದ ಭಾಗಗಳನ್ನು ಸ್ಪರ್ಶಿಸಿ, ಲೈಂಗಿಕ ಕಿರುಕುಳ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಕೆಲ ದಿನಗಳವರೆಗೂ ಮಹಿಳೆ ಈ ಕಹಿ ಅನುಭವದ ಬಗ್ಗೆ ಯಾರೊಂದಿಗೂ ಹೇಳಿಕೊಂಡಿರಲಿಲ್ಲ. ಆದರೆ ಇತ್ತೀಚೆಗೆ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಸಹದ್ಯೋಗಿ ಬಳಿ ಅಳಲು ತೋಡಿಕೊಂಡಿದ್ದರು. ಈ ಸಂಬಂಧ ದೂರು ನೀಡಿದ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಕೃತ್ಯವೆಸಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೆ, ವಿಚಾರಣೆಯಲ್ಲಿ ತನ್ನ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದು, ಸದ್ಯ ಆರೋಪಿಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.







