15 ಸಾವಿರ ರೂ. ಗೌರವಧನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಅಹೋರಾತ್ರಿ ಹೋರಾಟ

ಬೆಂಗಳೂರು : ದೇಶದ ವಿವಿಧ ರಾಜ್ಯಗಳ ಮಾದರಿಯಲ್ಲೇ ಕರ್ನಾಟಕ ಸರಕಾರದಿಂದ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗೌರವಧನವನ್ನು 15 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು. ಎಲ್ಲ ಆ್ಯಪ್‍ಗಳ ಮೂಲಕ ಮೊಬೈಲ್ ಕೆಲಸಗಳನ್ನು ಒತ್ತಾಯಪೂರ್ವಕವಾಗಿ ಮಾಡಿಸಿಕೊಳ್ಳುವುದನ್ನು ಕೈಬಿಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಸಾವಿರಾರು ಮಂದಿ ಆಶಾ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಅಹೋರಾತ್ರಿ ಹೋರಾಟ ಆರಂಭಿಸಿದ್ದಾರೆ.
ಮಂಗಳವಾರ ಫ್ರೀಡಂ ಪಾರ್ಕ್‍ನಲ್ಲಿ ಅನಿರ್ದಿಷ್ಟಾವಧಿ ಚಳವಳಿ ನಡೆಸುತ್ತಿರುವ ಆಶಾಗಳು, ಮೊಬೈಲ್‍ಫೋನ್ ಮೂಲಕ ಮಾಡಿಸುವ ಕೆಲಸಗಳಿಗೆ ಮೊಬೈಲ್ ಒದಗಿಸಿ, ಅಗತ್ಯ ಪ್ರೊ ತ್ಸಾಹಧನ ನಿಗದಿ ಮಾಡಬೇಕು. ಮೊಬೈಲ್ ಕೆಲಸ ಮಾಡಲು ಸಾಧ್ಯವಾಗದವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ನಿವೃತ್ತಿಯಾಗಿರುವ ಆಶಾ ಕಾರ್ಯಕರ್ತೆಯರಿಗೆ ನಿಯಮಾನುಸಾರ ಬಾಕಿ ಇರುವ ಇಡಿಗಂಟನ್ನು ನೀಡಬೇಕು ಎಂದು ಒತ್ತಾಯಿಸಿದರು.
ಆಶಾ ನಿಧಿ ಮೂಲಕ ಕೇಂದ್ರದ ಪ್ರೋ ತ್ಸಾಹಧನವು ಆಶಾ ಕಾರ್ಯಕರ್ತೆಯರು ಮಾಡಿದ ಕೆಲಸಕ್ಕೆ ತಕ್ಕಷ್ಟು ಬರುತ್ತಿಲ್ಲ. ಆಶಾ ಕಾರ್ಯಕರ್ತೆಯರಿಗೆ ಕೂಡಲೇ ಬಾಕಿ ಇರುವ ಪ್ರೋತ್ಸಾಹಧನ ನೀಡಬೇಕು. ಮಾರ್ಗಸೂಚಿಗೆ ವಿರುದ್ಧವಾಗಿ ಸುಗಮಕಾರರ ಸೇವೆಯನ್ನು 2025ರ ಫೆಬ್ರವರಿ 25ರಂದು ಹಿಂಪಡೆಯಲಾಗಿದ್ದು, ನಿಯಮಾನುಸಾರ ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರಿಸಬೇಕು. ಆರ್‌ಒಪಿಯಲ್ಲಿ ಅನುಮೋದನೆಯಾದಂತೆ 2024-25ನೇ ಸಾಲಿನಲ್ಲಿ ಹೆಚ್ಚಳವಾದ ಮಾಸಿಕ 1,500 ರೂ.ನಂತೆ ಒಂದು ವರ್ಷದ ಬಾಕಿ ಹಣ ನೀಡಬೇಕು ಎಂದು ಮನವಿ ಮಾಡಿದರು.
ಕೇಂದ್ರದ ನಿರ್ದೇಶನದಂತೆ, ರಾಜ್ಯದಲ್ಲಿ ಬಾಕಿ ಇರುವ ಎನ್‍ಐಒಎಸ್ ತರಬೇತಿ ಪೂರ್ಣಗೊಳಿಸಿದ ಆಶಾ ಮತ್ತು ಆಶಾ ಸುಗಮಕಾರರಿಗೆ ಒಂದು ತರಬೇತಿಗೆ 5ಸಾವಿರ ರೂ.ನಂತೆ ವಿಶೇಷ ಪ್ರೋತ್ಸಾಹಧನವನ್ನು ನೀಡಬೇಕು. ತೀವ್ರ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಕನಿಷ್ಠ 3 ತಿಂಗಳುಗಳ ಕಾಲ ರಾಜ್ಯ ಸರಕಾರದ ನಿಶ್ಚಿತ ಗೌರವಧನ ಮತ್ತು ದೈನಂದಿನ ಚಟುವಟಿಕೆಗಳ ನಿಗದಿತ ಪ್ರೋತ್ಸಾಹಧನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ, ಸೇವಾ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ರಾಜ್ಯದ ಮಾದರಿಯಲ್ಲೇ ನಿವೃತ್ತಿ ಸೌಲಭ್ಯವನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು. ಮೆಲ್ಕಂಡ ಎಲ್ಲ ಬೇಡಿಕೆ ಈಡೇರಿಸುವ ವರೆಗೆ ಅನಿರ್ದಿಷ್ಟಾವಧಿ ಅಹೋರಾತ್ರಿ ಹೋರಾಟವನ್ನು ಆಶಾ ಕಾರ್ಯಕರ್ತೆಯರು ಹಿಂಪಡೆಯುವುದಿಲ್ಲ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಲಾಗಿದೆ.
ಭರವಸೆ ಈಡೇರಿಸಲಿ: ಅನಿರ್ದಿಷ್ಟಾವಧಿ ಅಹೋರಾತ್ರಿ ಹೋರಾಟವನ್ನುದ್ದೇಶಿಸಿ ಮಾತನಾಡಿದ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಜೀವನ ದುಸ್ತರವಾಗಿದೆ. ಬೇರೆ ರಾಜ್ಯಗಳಲ್ಲಿ ಆಶಾಗಳಿಗೆ ಹೆಚ್ಚಿನ ಗೌರವಧನ ನೀಡಲಾಗುತ್ತಿದೆ. ಕರ್ನಾಟಕದ ಆಶಾಗಳಿಗೆ ಅಂದು ಸಿಎಂ ಸಿದ್ದರಾಮಯ್ಯ 10 ಸಾವಿರ ರೂ.ವೇತನದ ಭರವಸೆ ನೀಡಿ, ಅದನ್ನು ಈಡೇರಿಸದಿರುವುದು ನಾಚಿಕೆಗೇಡಿನ ಸಂಗತಿ ಎಂದು ದೂರಿದರು.
ಮಹಿಳೆಯರು ಮನೆ ತೊರೆದು ಆಶಾಗಳಾಗಿ ಸಮಾಜದ ಕೆಲಸ ಮಾಡುತ್ತಿದ್ದಾರೆ. ಸರಕಾರ ಆಶಾಗಳ ಬೇಡಿಕೆ ಈಡೇರಿಸಿ, ಮಹಿಳೆಯರ ಶ್ರಮಕ್ಕೆ ತಕ್ಕ ಗೌರವ ನೀಡಬೇಕು. ನಮ್ಮ ಹೊಲದಲ್ಲಿ ಕೆಲಸ ಮಾಡುವ ಕೂಲಿಕಾರರಿಗೆ 10 ಸಾವಿರ ರೂ.ಕೊಡುತ್ತಿದ್ದೇವೆ. ಒಬ್ಬ ವ್ಯಕ್ತಿ ಈ ಸಂಬಳ ಕೊಡಲು ಸಾಧ್ಯವಿರುವಾಗ ಸರಕಾರಕ್ಕೆ ಏಕೆ ಸಾಧ್ಯವಿಲ್ಲ? ಅಂದಿನ ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತನ್ನು ಇಂದಿನ ಸಿಎಂ ಡಿ.ಕೆ. ಶಿವಕುಮಾರ್ ನಡೆಸಿಕೊಡಬೇಕು ಎಂದು ಅವರು ಆಗ್ರಹಿಸಿದರು.
ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ ಮಾತನಾಡಿ, ಸರಕಾರವು ಆಶಾಗಳ ಗೌರವಧನ ಹೆಚ್ಚಿಸುವ ಬದಲು ಅವರನ್ನು ಮನೆಗೆ ಕಳುಹಿಸುವ ಹುನ್ನಾರ ನಡೆಸಿದೆ. ಅವಿವೇಕಿ ಸರಕಾರವು ಸಾವಿರಾರು ಕಾರ್ಯಕರ್ತೆಯರು ಮತ್ತು ಸುಗಮಕಾರರ ಕೆಲಸ ಕಿತ್ತುಕೊಳ್ಳಲು ಹೊಂಚು ಹಾಕಿದೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು. ಕೇಂದ್ರದ ಬಿಜೆಪಿ ಹಾಗೂ ರಾಜ್ಯ ಕಾಂಗ್ರೆಸ್ ಸರಕಾರ ಎರಡೂ ಒಂದೇ. ಈ ಸ್ಪಷ್ಟತೆಯೊಂದಿಗೆ ನಮ್ಮ ಚಳುವಳಿ ಮುನ್ನಡೆಯಬೇಕು ಎಂದು ಕರೆ ನೀಡಿದರು.
ನಿವೃತ್ತ ಪ್ರಾಧ್ಯಾಪಕಿ ಪ್ರೊ.ಲತಾ ಮೈಸೂರು ಮಾತನಾಡಿ, ಸತ್ಯಹರಿಶ್ಚಂದ್ರರ ನೆಲದಲ್ಲಿ ಹೆಜ್ಜೆ-ಹೆಜ್ಜೆಗೂ ಸುಳ್ಳಾಡುವ ಸರಕಾರವು ನಮ್ಮನ್ನಾಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಇಂದು ಆಶಾಗಳಿಗೆ ನೀಡುವ 5ಸಾವಿರರೂ. ಮಾಸಿಕ ಗೌರವಧನವು ಸರಕಾರಿ ಅಧಿಕಾರಿಗಳ ಒಂದು ಹೊತ್ತಿನ ಚಹಾ, ಬಿಸ್ಕೆಟ್‍ಗೆ ಸಲ್ಲುವ ವೆಚ್ಚಕ್ಕಿಂತ ಕಡಿಮೆ ಇದೆ ಎಂದರು.
ಹಸಿದ ಹೊಟ್ಟೆಗಳ ನಡುವೆ ತಟ್ಟೆ ತುಂಬಾ ಅನ್ನ ಇಟ್ಟು ಭಕ್ಷಿಸುವವರ ಪರವಾಗಿ ಇಂದು ಸರಕಾರಗಳು ನಿಂತಿವೆ. ಸರಕಾರಿ ಮೇಲಧಿಕಾರಿಗಳಿಗೆ ಗರಿಷ್ಠ ವೇತನ ನೀಡುವ ಸರಕಾರಗಳು, ಆಶಾಗಳಿಗೆ ಕನಿಷ್ಠ ವೇತನವನ್ನು ನೀಡದೇ ಇರುವುದೇ ಅನ್ಯಾಯ. ಇಂದು ಬಿಡಿಬಿಡಿಯಾಗಿದ್ದ ಆಶಾಗಳು ಒಗ್ಗಟ್ಟಾಗಿ ಒಂದಾಗಿದ್ದಾರೆ. ಈ ಒಗ್ಗಟ್ಟಿನ ಹೋರಾಟ ಯಶಸ್ವಿಯಾಗಲಿ ಎಂದು ಅವರು ಹಾರೈಸಿದರು.
ಹಂಪಿ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಎ.ಮುರಿಗೆಪ್ಪ ಮಾತನಾಡಿ, ‘ಆತಂಕ ಮತ್ತು ಆವೇಶವನ್ನು ಹೊತ್ತು ಆಶಾ ಕಾರ್ಯಕರ್ತೆಯರು ಹೋರಾಟಕ್ಕೆ ಬಂದಿದ್ದೀರಿ. ನೀವು ಕೇಳುತ್ತಿರುವ 15ಸಾವಿರ ರೂ. ಗೌರವಧನ ದೊಡ್ಡ ಮೊತ್ತವಲ್ಲ. ಸರಕಾರಿ ಶಾಲೆಗಳನ್ನು ಮುಚ್ಚುವ ಮಂತ್ರಿ ಹಾಗೂ ಮಾತಿನಂತೆ ನಡೆಯದ ಸಿಎಂ ಇದ್ದಾರೆ. ಈ ಕೂಡಲೇ 15ಸಾವಿರ ರೂ.ಗೌರವಧನ ನಿಗದಿಯಾಗಬೇಕು ಮತ್ತು ಪ್ರತಿ ವರ್ಷ ಬೆಲೆ ಏರಿಕೆಗೆ ಅನುಗುಣವಾಗಿ ಇಂತಿಷ್ಟು ಶೇಕಡ ಗೌರವಧನವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಸಂಘದ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, ಗುಲ್ಬರ್ಗಾ ವಿವಿಯ ನಿವೃತ್ತ ಪ್ರಾಧ್ಯಾಪಕ ಕಾಶೀನಾಥ್ ಅಂಬಲಗಿ, ಹೋರಾಟಗಾರ ಉಗ್ರ ನರಸಿಂಹೇಗೌಡ, ಹಿರಿಯ ವಕೀಲ ಖಿಸಾರ್, ಡಾ.ಸುಧಾ ಕಾಮತ್, ಆರ್.ಗೀತಾ, ಕೆ.ಸೋಮಶೇಖರ್, ಕೆ.ಉಮಾ ಸಹಿತ ವಿವಿಧ ಸಂಘಟನೆಗಳ ಮುಖಂಡರು, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
ನುಡಿದಂತೆ ನಡೆಯುವ ಸರಕಾರವೇ?: ‘ಸರಕಾರ ಪದೇ ಪದೇ ಆಶಾಗಳನ್ನು ಬೀದಿಗೆ ತಳ್ಳುತ್ತಿರುವ ಕಾರಣ ಆಶಾಗಳಿಗೆ ಹೋರಾಟ ಅನಿವಾರ್ಯ. ರಾಜ್ಯದಲ್ಲಿ 18 ವರ್ಷಗಳಿಂದ ಹಳ್ಳಿಗಾಡು ಮತ್ತು ನಗರದ ಕೊಳಚೆ ಪ್ರದೇಶಗಳಲ್ಲಿ ಹಗಲು-ರಾತ್ರಿ ದುಡಿಯುವ ಆಶಾಗಳಿಗೆ ದುಡಿಮೆಗೆ ತಕ್ಕ ಪ್ರತಿಫಲವಿಲ್ಲ. 2025ರ ಜನವರಿಯಲ್ಲಿ ಸರಕಾರವು 10ಸಾವಿರ ರೂ. ನಿಗದಿ ಮಾಡುತ್ತೇವೆಂದ ಮಾತಿಗೆ ಬೆಲೆ ಕೊಟ್ಟು ಆಶಾಗಳು ಹೋರಾಟ ಹಿಂತೆಗೆದುಕೊಂಡಿದ್ದರು. ಆದರೆ, ಇಂದಿಗೂ ಇದು ಆಶ್ವಾಸನೆಯಾಗಿಯೇ ಉಳಿದಿದೆ. ನೆರೆಯ ಕೇರಳ, ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿ 10ಸಾವಿರ ರೂ. ಹಾಗೂ 12ಸಾವಿರ ರೂ. ಮಾಸಿಕ ವೇತನ ನಿಗದಿಪಡಿಸುವುದಾದರೆ ನಮ್ಮ ರಾಜ್ಯದ ಆಶಾಗಳಿಗೇಕಿಲ್ಲ? ದುಡಿಯುವ ಹೆಣ್ಣುಮಕ್ಕಳಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳದ ಸರಕಾರ ನುಡಿದಂತೆ ನಡೆಯುವ ಸರಕಾರವೇ?’
-ಡಿ.ನಾಗಲಕ್ಷ್ಮಿ, ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ






