ಖೋ-ಖೋ ಕ್ರೀಡೆಗೆ ಉತ್ತೇಜನ ನೀಡಲು ಆಗ್ರಹ

ಬೆಂಗಳೂರು : ರಾಜ್ಯ ಖೋ-ಖೋ ಕ್ರೀಡಾಪಟುಗಳು ಸೇರಿದಂತೆ ಇನ್ನಿತರ ಕ್ರೀಡೆಗಳ ಕ್ರೀಡಾಪಟುಗಳಿಗೆ ರಾಜ್ಯ ಸರಕಾರ ಪ್ರಸ್ತುತ ಸಾಲಿನ ಬಜೆಟ್‍ನಲ್ಲಿ ಹೆಚ್ಚಿನ ನೆರವು ನೀಡಬೇಕೆಂದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಮಂಗಳವಾರ ನಗರದ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆ ನೇತೃತ್ವದಲ್ಲಿ ಜಮಾಯಿಸಿದ ಕ್ರೀಡಾಪಟುಗಳು, ಅಧಿಕೃತ ರಾಜ್ಯ ಕ್ರೀಡಾ ಸಂಘ-ಸಂಸ್ಥೆಗಳಿಗೆ ರಾಜ್ಯ ಸರಕಾರದಿಂದಲೇ ನೇರವಾಗಿ ಅನುದಾನ ನೀಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಘೋಷಣೆ ಕೂಗಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಲೋಕೇಶ್ವರ್, ಕ್ರೀಡೆ ಎಂದರೆ ಕ್ರಿಕೆಟ್ ಕಬ್ಬಡ್ಡಿ ಮಾತ್ರವಲ್ಲ, ಇತ್ತೀಚಿನ ದಿನಗಳಲ್ಲಿ ಖೋ ಖೋ ಕ್ರೀಡೆ ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಗ್ರಾಮೀಣ ಕ್ರೀಡೆಗೆ ಹೆಸರು ವಾಸಿಯಾಗಿರೋ ಖೋ ಖೋ ಕ್ರೀಡೆಗೆ ರಾಜ್ಯ ಸರಕಾರ ಸರಿಯಾದ ಮನ್ನಣೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಖೋ ಖೋ ಕ್ರೀಡಾಪಟು ಎಂ.ಕೆ.ಗೌತಮ್ ಮಾತನಾಡಿ, ನೆರೆಯ ರಾಜ್ಯದಲ್ಲಿ ಕ್ರೀಡಾ ಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ. ನಮ್ಮ ರಾಜ್ಯದಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನ ನೀಡಿ ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹ, ಅನುದಾನ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.







