‘ಸಾಮಾಜಿಕ, ಆರ್ಥಿಕ ಸಮೀಕ್ಷಾ ವರದಿ’ ಬಹಿರಂಗ ಪಡಿಸಲು ಆಗ್ರಹ

ಬೆಂಗಳೂರು : ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ‘ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷಾ(ಜಾತಿ ಗಣತಿ) ವರದಿ’ಯನ್ನು ಬಹಿರಂಗಪಡಿಸಿ, ಅದರ ಅನುಷ್ಠಾನಗೊಳಿಸಲು ಸರಕಾರ ತ್ವರತಗತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ‘ಅಹಿಂದ’ ಚಳವಳಿ ಒತ್ತಾಯಿಸಿದೆ.
ರವಿವಾರ ನಗರದ ಅರಮನೆ ರಸ್ತೆಯಲ್ಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಟ್ಟಡದಲ್ಲಿ ನಡೆದ ‘ಅಹಿಂದ’ ರಾಜ್ಯ ಘಟಕದ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದ ಜನರ ತೆರಿಗೆ ಹಣದಲ್ಲಿ ಆಯೋಗ ನಡೆಸಿದ್ದ ಸಮೀಕ್ಷಾ ವರದಿಯನ್ನು ಕೋರ್ಟ್ ತಡೆಯಾಜ್ಞೆ ಸೇರಿದಂತೆ ಇನ್ನಿತರ ನೆಪದಲ್ಲಿ ವಿಳಂಬ ನೀತಿ ಸರಿಯಲ್ಲ. ವರದಿ ಬಿಡುಗಡೆ ಹಾಗೂ ಅನುಷ್ಠಾನಕ್ಕೆ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಹೋರಾಟ ರೂಪಿಸಲು ನಿರ್ಧರಿಸಲಾಗಿದೆ.
ಕೇಂದ್ರ ಸರಕಾರ ಘೋಷಿಸಿದಂತೆ ರಾಷ್ಟ್ರೀಯ ಜನಗಣತಿ/ಜಾತಿಗಣತಿಯನ್ನು ಕೂಡಲೇ ನಡೆಸಬೇಕು. ಅಲ್ಲದೆ, ಅಹಿಂದ ವರ್ಗಗಳ ಆರ್ಥಿಕ ಸದೃಢತೆಗೆ ‘ಅಹಿಂದ ಸಬಲೀಕರಣ ಸೌಹಾರ್ದ ಸಹಕಾರಿ ಬ್ಯಾಂಕ್’ ಸ್ಥಾಪನೆಯ ಕುರಿತು ಚಿಂತನೆ ನಡೆಸಲಾಯಿತು. ಇದೇ ವೇಳೆ ಹಿರಿಯ ಸಾಹಿತಿ, ದಲಿತ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಸಂಚಾಲಕಿ ವಿಜಯಲಕ್ಷ್ಮಿ ಅರಸ್, ಪದಾಧಿಕಾರಿಗಳಾದ ಬಿ.ಟಿ. ಮಂಜುನಾಥ್, ವೆಂಕಟೇಶ್‍ಗೌಡ, ಅಶೋಕ್ ಕುಮಾರ್, ವೆಂಕಟೇಶ್, ಕುಮಾರಸ್ವಾಮಿ ಸೇರಿದಂತೆ ವಿವಿಧ ಜಿಲ್ಲೆಗಳ ಮುಖಂಡರು ಹಾಜರಿದ್ದರು.






