ಬೆಂಗಳೂರಿನ ಥಣಿಸಂದ್ರದಲ್ಲಿ ಏಕಾಏಕಿ 60ಕ್ಕೂ ಅಧಿಕ ಮನೆಗಳ ತೆರವು

ಬೆಂಗಳೂರು : ರಾಜ್ಯ ಸರಕಾರವು ಅಕ್ರಮ ಒತ್ತುವರಿ ಆರೋಪದ ಮೇರೆಗೆ ನಗರದಲ್ಲಿರುವ ಕೋಗಿಲು ಬಡಾವಣೆಯಲ್ಲಿ ನೂರಾರು ಮನೆಗಳನ್ನು ನೆಲಸಮ ಮಾಡಿದ್ದ ಮಾದರಿಯಲ್ಲಿಯೇ, ಇಲ್ಲಿನ ಥಣಿಸಂದ್ರದಲ್ಲಿಯೂ 60ಕ್ಕೂ ಅಧಿಕ ಮನೆಗಳನ್ನು ಗುರುವಾರದಂದು ಏಕಾಏಕಿ ತೆರವುಗೊಳಿಸಿದೆ.
ಗುರುವಾರ ಬೆಳಗ್ಗೆ 6 ಗಂಟೆಯಿಂದಲೇ ನಾಗವಾರ ಬಳಿಯ ಥಣಿಸಂದ್ರ ಸಮೀಪದ ಅಶ್ವಥ್ ನಗರದಲ್ಲಿ (ಸರಾಯಿಪಾಳ್ಯ) ಒತ್ತುವರಿ ತೆರವು ಕಾರ್ಯಾಚರಣೆ ಹೆಸರಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಅಧಿಕಾರಿಗಳು ಸುಮಾರು 60ಕ್ಕೂ ಅಧಿಕ ಮನೆಗಳು ಸೇರಿ ಕಾರು ಗ್ಯಾರೇಜ್, ಗೋದಾಮು, ಶೆಡ್‍ಗಳನ್ನು ತೆರವು ಮಾಡಿದ್ದಾರೆ.
ಸುಮಾರು 20 ವರ್ಷಗಳಿಂದ ಮನೆಯಲ್ಲಿ ವಾಸವಾಗಿದ್ದು, ಇ-ಖಾತಾ, ನೀರಿನ ಬಿಲ್, ವಿದ್ಯುತ್ ಬಿಲ್ ಸೇರಿದಂತೆ ಆಸ್ತಿಗೆ ಸಂಬಂಧಿಸಿದ ಅನೇಕ ದಾಖಲೆಗಳನ್ನು ಇಟ್ಟುಕೊಂಡಿದ್ದರೂ, ಬಿಡಿಎ ಅಧಿಕಾರಿಗಳು ಏಕಾಏಕಿ ಮನೆಗಳನ್ನು ನೆಲಸಮ ಮಾಡಿದ್ದಾರೆ. ಅಧಿಕಾರಿಗಳು ಮನೆಗಳನ್ನು ತೆರವು ಮಾಡುವ ಮುನ್ನ, ಖಾಲಿ ಮಾಡುವಂತೆ ಯಾವುದೇ ನೋಟೀಸ್ ಅನ್ನು ನೀಡಲಿಲ್ಲ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ಬಹುತೇಕ ಜನರು ಮನೆಗಳನ್ನು ಹಣ ನೀಡಿ ಖರೀದಿ ಮಾಡಿದ್ದಾರೆ. ಒಡವೆಗಳನ್ನು ಮಾರಿ, ಜಾಗ ಖರೀದಿಸಿದ್ದಾರೆ. ಖರೀದಿ ಮಾಡುವ ವೇಳೆ ಇದು ಸರಕಾರಿ ಜಾಗ, ಬಿಡಿಎ ಜಾಗ ಎಂದು ಅಧಿಕಾರಿಗಳಿಗೆ ತಿಳಿದಿರಲಿಲ್ಲವೇ? ಕೆಲವರು ಬಾಡಿಗೆಗೆ ಮನೆಗಳನ್ನು ಪಡೆದುಕೊಂಡು ವಾಸವಾಗಿದ್ದಾರೆ. ಇದನ್ನೆಲ್ಲ ಪರಿಗಣನೆಗೆ ತೆಗೆದುಕೊಳ್ಳದೆ, ಕನಿಷ್ಠ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದಕ್ಕೂ ಸಮಯ ನೀಡದೆ, ಮನೆಗಳನ್ನು ನೆಲಸಮ ಮಾಡಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ಈ ಹಿಂದೆ ಸಚಿವ ಕಂದಾಯ ಕೃಷ್ಣ ಭೈರೇಗೌಡ ಅವರು ‘ಇಲ್ಲಿನ ನಿವಾಸಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ’ ಎಂದು ಭರವಸೆ ನೀಡಿದ್ದರು. ಆದರೆ ಈಗ ಬಿಡಿಎ ಅಧಿಕಾರಿಗಳು ಸುಮಾರು 200ಕ್ಕೂ ಅಧಿಕ ಪೊಲೀಸರೊಂದಿಗೆ ಬಂದು ಮನೆಗಳನ್ನು ತೆರವು ಮಾಡಿದ್ದಾರೆ. ಇದು ನಂಬಿಕೆ ದ್ರೋಹವಾಗಿದ್ದು, ನ್ಯಾಯ ಸಿಗದಿದ್ದರೆ ಸ್ಥಳದಲ್ಲೇ ಧರಣಿ ಕೂರುತ್ತೇವೆ ಎಂದು ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
‘ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ, ಆಸ್ತಿಯನ್ನು ನೋಂದಣಿ ಮಾಡಿಕೊಳ್ಳಲಾಗಿದೆ. ಆಸ್ತಿಗೆ ಸಂಬಂಧಿಸಿದಂತೆ ತರಿಗೆ ಪಾವತಿ ಸೇರಿ ಇತರೆ ಸರಕಾರಿ ದಾಖಲೆಗಳನ್ನೂ ಇಟ್ಟುಕೊಳ್ಳಲಾಗಿದೆ. ಆದರೆ ಮನೆಗಳನ್ನು ತೆರವು ಮಾಡಲು ಹೈಕೋರ್ಟ್ ಆದೇಶದ ನೀಡಿದೆ ಎಂದು ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ. ಬಿಡಿಎ ಅಧಿಕಾರಿಗಳು ಹೈಕೋರ್ಟ್‍ಗೆ ಸುಳ್ಳು ಮಾಹಿತಿಗಳನ್ನು ನೀಡಿದ್ದು, ಇದು ಕಾನೂನಿನ ದುರ್ಬಳಕೆಯಾಗಿದೆ’
-ಹುಸೈನ್, ಸಂತ್ರಸ್ತರ ಪರ ವಕೀಲ
ಬಂಗಾರ, ಬೆಳ್ಳಿ ಸೇರಿ ಬೆಲೆ ಬಾಳುವ ವಸ್ತುಗಳ ಕಳವು: ‘ಒತ್ತುವರಿ ತೆರವು ಮಾಡುವ ವೇಳೆ ಮನೆಯಲ್ಲಿ ಬಂಗಾರ, ಬೆಳ್ಳಿ ಸೇರಿ ಬೆಲೆ ಬಾಳುವ ವಸ್ತುಗಳು, ನಗದು, ದಿನನಿತ್ಯದ ಉಪಯೋಗಿ ವಸ್ತುಗಳು ಕಳ್ಳತನವಾಗಿದೆ. ಪೊಲೀಸರ ಸಮ್ಮುಖದಲ್ಲಿಯೇ ಕಳ್ಳತನವಾಗಿದೆ. ರಾಜ್ಯದಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಮಾಡಲ್ ಸರಕಾರ ಅಧಿಕಾರದಲ್ಲಿದೆ ಎಂದು ಮನೆ ಕಳೆದುಕೊಂಡು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.







