ಧರ್ಮಸ್ಥಳ ಪ್ರಕರಣ | ವಿಶೇಷ ತನಿಖಾ ಸಮಿತಿಯನ್ನು ರಚಿಸುವಂತೆ ಬಿ.ಆರ್.ಗವಾಯಿಗೆ ಪತ್ರ

ಭಾರತದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ (PTI)
ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಸುತ್ತಮುತ್ತ ನೂರಾರು ಹದಿಹರೆಯದ ಯುವತಿಯರ ಮೇಲೆ ಅತ್ಯಾಚಾರ, ಕೊಲೆ ಆರೋಪಕ್ಕೆ ಸಂಬಂಧಿಸಿ ತನಿಖೆಯ ಮೇಲುಸ್ತುವಾರಿಗಾಗಿ ನ್ಯಾಯಮೂರ್ತಿಗಳ ವಿಶೇಷ ತನಿಖಾ ಸಮಿತಿಯನ್ನು ರಚಿಸುವಂತೆ ನೈಜ ಹೋರಾಟಗಾರರ ವೇದಿಕೆಯ ಸಂಚಾಲಕ ಎಚ್.ಎಂ.ವೆಂಕಟೇಶ್ ಸುಪ್ರಿಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಧರ್ಮಸ್ಥಳದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಹದಿಹರೆಯದ ಯುವತಿಯರ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಗಳನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ಪ್ರಕರಣವನ್ನು ತನಿಖೆ ನಡೆಸದಂತೆ, ಸಂತ್ರಸ್ಥರ ಕುಟುಂಬಗಳಿಗೆ ನ್ಯಾಯ ಸಿಗದಂತೆ ತಮ್ಮ ಪ್ರಭಾವವನ್ನು ಬಳಸಿಕೊಳ್ಳುತ್ತಿರುವುದು ಸುಮಾರು ವರ್ಷಗಳಿಂದ ರಾಜ್ಯದ ಪ್ರಜ್ಞಾವಂತ ನಾಗರಿಕರು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಸ್ವಚ್ಛತಾ ಕಾರ್ಮಿಕ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿ, ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹೇಳಿಕೆಯನ್ನು ನೀಡಿರುತ್ತಾರೆ. ಆದರೆ ಸರಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಎಚ್.ಎಂ. ವೆಂಕಟೇಶ್ ಆರೋಪಿಸಿದ್ದಾರೆ.
ನ್ಯಾಯಾಂಗದ ಮೇಲೆ ನಮಗೆ ಅತ್ಯಂತ ಗೌರವ, ನಂಬಿಕೆ, ವಿಶ್ವಾಸ ಮತ್ತು ಶೀಘ್ರ ನ್ಯಾಯದಾನ ಸಿಗುತ್ತದೆ ಎಂಬ ಭರವಸೆಯೊಂದಿಗೆ ಈ ಪ್ರಕರಣದಲ್ಲಿ ದೇಶದ ವಿವಿಧ ರಾಜ್ಯಗಳ ಉಚ್ಚ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ನ್ಯಾಯಮೂರ್ತಿಗಳನ್ನು ಒಳಗೊಂಡ ವಿಶೇಷ ತನಿಖಾ ಸಮಿತಿಯನ್ನು ತಾವು ರಚಿಸಿ ಧರ್ಮಸ್ಥಳದಲ್ಲಿ ನಡೆದ ಅತ್ಯಾಚಾರ, ಕೊಲೆ ಪ್ರಕರಣದ ಬಗ್ಗೆ ನ್ಯಾಯ ಒದಗಿಸುವಲ್ಲಿ ಮುಖ್ಯ ಪಾತ್ರ ವಹಿಸಬೇಕೆಂದು ನಾವು ತಮ್ಮಲ್ಲಿ ಗೌರವ ಪೂರ್ವಕವಾದ ಮನವಿಯನ್ನು ಸಲ್ಲಿಸುತ್ತಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಯಶವಂತ್ ವರ್ಮಾ ಭ್ರಷ್ಟಾಚಾರ ಪ್ರಕರಣದ ತನಿಖೆಗೆ ರಚಿಸಿದ ಸಮಿತಿಯಂತೆ ಧರ್ಮಸ್ಥಳದಲ್ಲಿ ನಡೆದ ಹದಿಹರೆಯದ ಯುವತಿಯರ, ಮಹಿಳೆಯರ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣದ ತನಿಖೆಗಾಗಿ ನ್ಯಾಯಮೂರ್ತಿಗಳ ಸಮಿತಿಯನ್ನು ತಕ್ಷಣ ರಚಿಸಬೇಕು. ಸಮಿತಿಯ ಮೇಲ್ವಿಚಾರಣೆಯಲ್ಲಿ ತನಿಖೆ ನಡೆದಾಗ ಮಾತ್ರ ನಮಗೆ ನ್ಯಾಯ ಸಿಗುತ್ತದೆ.
-ಎಚ್.ಎಂ. ವೆಂಕಟೇಶ್, ನೈಜ ಹೋರಾಟಗಾರರ ವೇದಿಕೆಯ ಸಂಚಾಲಕ







