ಧರ್ಮಸ್ಥಳ ಪ್ರಕರಣ | ತನಿಖಾ ವರದಿ, ಪ್ರಗತಿ ವಿವರ ಸಲ್ಲಿಸುವಂತೆ ಎಸ್ಐಟಿಗೆ ನಿರ್ದೇಶಿಸಲು ಸರಕಾರದ ಮುಖ್ಯ ಕಾರ್ಯದರ್ಶಿಗೆ ರಾಜ್ಯ ಮಹಿಳಾ ಆಯೋಗ ಪತ್ರ

ಬೆಂಗಳೂರು: ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಮಹಿಳೆಯರು ಮತ್ತು ಯುವತಿಯರ ಮೇಲಿನ ದೌರ್ಜನ್ಯ/ಕೊಲೆ, ನಾಪತ್ತೆ, ಅಸಹಜ ಸಾವುಗಳ ಪ್ರಕರಣಗಳ ಕುರಿತು ವಿಶೇಷ ತನಿಖಾ ತಂಡ (ಎಸ್ಐಟಿ) ಇದುವರೆಗೆ ಕೈಗೊಂಡಿರುವ ಸಮಗ್ರ ತನಿಖೆಯ ವರದಿ/ಪ್ರಗತಿ ವಿವರಗಳನ್ನು ಕೂಡಲೇ ರಾಜ್ಯ ಮಹಿಳಾ ಆಯೋಗಕ್ಕೆ ಸಲ್ಲಿಸಲು ಎಸ್ಐಟಿ ಮುಖ್ಯಸ್ಥರಿಗೆ ಸೂಕ್ತ ನಿರ್ದೇಶನ ನೀಡುವಂತೆ ಮಹಿಳಾ ಆಯೋಗವು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಕೋರಿದೆ.
ಈ ಕುರಿತು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿಯವರು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಗೆ ಜ.12ರಂದು ಪತ್ರ ಬರೆದಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆ ಮೊ. ಸಂ. 39/2025 ಕಲಂ 211(ಎ) ಬಿ.ಎನ್.ಎಸ್. ಅಡಿಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ಇದರ ಸಂಬಂಧ ಇತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಬಹುದಾದ ಪ್ರಕರಣಗಳ ಸಮಗ್ರ ತನಿಖೆಗಾಗಿ ರಚಿಸಿರುವ ವಿಶೇಷ ತನಿಖಾ ತಂಡ(SIT)ದಿಂದ ಇಲ್ಲಿಯವರೆಗಿನ ತನಿಖಾ ವರದಿ ಮತ್ತು ಪ್ರಗತಿ ವಿವರಗಳನ್ನು ಆಯೋಗಕ್ಕೆ ಒದಗಿಸುವಂತೆ ಸೂಚಿಸಲು ಕೋರಿದ್ದಾರೆ.
ಧರ್ಮಸ್ಥಳದಲ್ಲಿ ಮಹಿಳೆಯರ ಅಸಹಜ ಸಾವುಗಳು ಹಾಗೂ ನಾಪತ್ತೆ ಪ್ರಕರಣಗಳ ಸಮಗ್ರ ಮತ್ತು ನಿಷ್ಪಕ್ಷ ತನಿಖೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ)ವನ್ನು ರಚಿಸುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಸರಕಾರವನ್ನು ಕೋರಿತ್ತು.
ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಮೇಲೆ ನಡೆದಿರುವ ಗಂಭೀರ ಸ್ವರೂಪದ ದೌರ್ಜನ್ಯ, ಹತ್ಯೆ, ಅತ್ಯಾಚಾರ, ಅಸ್ವಾಭಾವಿಕ ಸಾವು ಮತ್ತು ನಾಪತ್ತೆ ಪ್ರಕರಣಗಳ ಸಮಗ್ರ ತನಿಖೆಯಾಗಬೇಕು ಎಂಬುದೇ ಆಯೋಗದ ಮುಖ್ಯ ಆಶಯವಾಗಿತ್ತು. ಆಯೋಗದ ಮನವಿಗೆ ಸ್ಪಂದಿಸಿ ಸರಕಾರವು ವಿಶೇಷ ತನಿಖಾ ತಂಡ(SIT)ವನ್ನು ರಚಿಸಿ ಆದೇಶಿಸಿದ್ದು, ಈ ತಂಡವು ಉಲ್ಲೇಖಿತ ಕ್ರಿಮಿನಲ್ ಮೊಕದ್ದಮೆಯೊಂದಿಗೆ, "ಇದರ ಸಂಬಂಧ ಕರ್ನಾಟಕ ರಾಜ್ಯದ ಇತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ/ದಾಖಲಾಗುವ ಇತರ ಎಲ್ಲ ಕ್ರಿಮಿನಲ್ ಪ್ರಕರಣಗಳ ತನಿಖೆ ನಡೆಸಲು ಸೂಚಿಸಿದೆ. ಆದಾಗ್ಯೂ, ಇಲ್ಲಿಯವರೆಗೆ ಎಸ್ಐಟಿ ತನಿಖೆಯು ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ ವ್ಯಕ್ತಿಯ ಹೇಳಿಕೆಯ ಮಿತಿಯೊಳಗೆ ಉತ್ಪನನಕ್ಕೆ ಮತ್ತು ಆತನ ಹೇಳಿಕೆಗೆ ಮಾತ್ರವೇ ಸೀಮಿತಗೊಂಡಿರುವಂತೆ ಕಂಡುಬರುತ್ತಿದೆ. ಆಯೋಗದ ಕೋರಿಕೆಗೆ ಅನುಗುಣವಾಗಿ, ಮಹಿಳೆಯರು ಮತ್ತು ಯುವತಿಯರ ನಾಪತ್ತೆ, ಅತ್ಯಾಚಾರ, ಕೊಲೆ ಪ್ರಕರಣಗಳು ಮತ್ತು ಅಸಹಜ ಸಾವುಗಳ ಕುರಿತು ಎಸ್ಐಟಿ ಸಮಗ್ರ ತನಿಖೆ ಕೈಗೊಂಡಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಆಯೋಗದಲ್ಲಿ ಸ್ವೀಕೃತವಾಗಿಲ್ಲ ಎಂದು ಉಲ್ಲೇಖಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಎಸ್ಐಟಿ ಮುಖ್ಯಸ್ಥರಿಗೆ ಆಯೋಗದಿಂದ ಈಗಾಗಲೇ ಪತ್ರ ಬರೆಯಲಾಗಿದ್ದು, ಯಾವುದೇ ಉತ್ತರ ಬಂದಿರುವುದಿಲ್ಲ. ಆಯೋಗಕ್ಕೆ ಸಿವಿಲ್ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯಿದ್ದು ಮಹಿಳಾ ಆಯೋಗದ ಕಾಯ್ದೆಯ ಪ್ರಕಾರ ವರದಿ ತರಿಸಿಕೊಳ್ಳುವ ಅಧಿಕಾರ ಹೊಂದಿರುತ್ತದೆ. ಆದ್ದರಿಂದ, ತಾವು ಈ ವಿಷಯದಲ್ಲಿ ತಕ್ಷಣ ಮಧ್ಯ ಪ್ರವೇಶಿಸಿ ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಮಹಿಳೆಯರು ಮತ್ತು ಯುವತಿಯರ ಮೇಲಿನ ದೌರ್ಜನ್ಯ/ಕೊಲೆ, ನಾಪತ್ತೆ, ಅಸಹಜ ಸಾವುಗಳ ಪ್ರಕರಣಗಳ ಕುರಿತು ಎಸ್ಐಟಿ ಇದುವರೆಗೆ ಕೈಗೊಂಡಿರುವ ಸಮಗ್ರ ತನಿಖೆಯ ವರದಿ/ಪ್ರಗತಿ ವಿವರಗಳನ್ನು ಕೂಡಲೇ ರಾಜ್ಯ ಮಹಿಳಾ ಆಯೋಗಕ್ಕೆ ಸಲ್ಲಿಸುವಂತೆ ಎಸ್ಐಟಿ ಮುಖ್ಯಸ್ಥರಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು ಎಂದು ಕೋರಿದ್ದಾರೆ.







